ರಾಜ್ಯ

ಶಾಲೆಗಳಲ್ಲಿ ಚಿಕ್ಕಿ ವಿತರಿಸುವಂತಿಲ್ಲ : ಸರಕಾರದ ಆದೇಶ

ಬೆಂಗಳೂರು: ಬಿಸಿಯೂಟ ಯೋಜನೆಯಡಿ ಸರ್ಕಾರಿ ಹಾಗೂ ಅನುದಾನಿತ ಶಾಲೆ ಮಕ್ಕಳಿಗೆ ವಿತರಿಸುತ್ತಿದ್ದ ಚಿಕ್ಕಿಯನ್ನು ಸ್ಥಗಿತಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಚಿಕ್ಕಿಯಲ್ಲಿ ಆರೋಗ್ಯಕ್ಕೆ ಹಾನಿ ಉಂಟು ಮಾಡುವ ಅಂಶಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ  ರಾಜ್ಯ ಸರ್ಕಾರ ಈ ಆದೇಶ ಹೊರಡಿಸಿದೆ.


1 ರಿಂದ 10ನೇ ತರಗತಿ ಮಕ್ಕಳಿಗೆ ಪೂರಕ ಪೌಷ್ಟಿಕ ರೂಪದಲ್ಲಿ ವಿತರಿಸಲಾಗುತ್ತಿರುವ ಚಿಕ್ಕಿಯಲ್ಲಿ ಅಪರ್ಯಾಪ್ತ ಕೊಬ್ಬಿನಾಂಶ (ಅನ್‌ಸ್ಯಾಚುರೇಟೆಡ್ ಫ್ಯಾಟ್) ಹೆಚ್ಚಿಗೆ ಇದ್ದು, ಇದರಲ್ಲಿ ಸಕ್ಕರೆ ಅಂಶ ಕೂಡ ಅಧಿಕವಾಗಿದೆ. ಚಿಕ್ಕಿಯನ್ನು ಸರಿಯಾಗಿ ಸಂಗ್ರಹಿಸದೇ ಇದ್ದಲ್ಲಿ ಕಲುಷಿತವಾಗಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಇರುವುದರಿಂದ ವಿತರಣೆ ಸ್ಥಗಿತಗೊಳಿಸಿ, ಮೊಟ್ಟೆ ಅಥವಾ ಬಾಳೆಹಣ್ಣು ವಿತರಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ.

ರಾಜ್ಯದ ಅನುದಾನಿತ ಮತ್ತು ಸರ್ಕಾರಿ ಶಾಲೆಗಳ 1ರಿಂದ 10ನೇ ತರಗತಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜತೆಗೆ ವಾರದ ಆರು ದಿನ ಮೊಟ್ಟೆ ವಿತರಿಸಲಾಗುತ್ತಿದೆ. ಮೊಟ್ಟೆ ತಿನ್ನದ ಮಕ್ಕಳಿಗೆ ಚಿಕ್ಕಿ ಅಥವಾ ಬಾಳೆಹಣ್ಣು ನೀಡಲಾಗುತ್ತಿತ್ತು.

ಬಹುತೇಕ ಶಾಲೆಗಳಲ್ಲಿ ಚಿಕ್ಕಿಯ ಗಾತ್ರ ಒಂದೇ ತೆರನಾಗಿ ಇಲ್ಲದಿರುವುದು, ಅವಧಿ ಮೀರಿದ ಸಂಗ್ರಹ ಮತ್ತಿತರ ಕಾರಣಗಳಿಂದಲೂ ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾಗಿ, ಚಿಕ್ಕಿ ವಿತರಣೆ ಮಾಡಬಾರದು ಎಂದು ಇಲಾಖೆ ಸೂಚಿಸಿದೆ.

Leave a Reply

Your email address will not be published. Required fields are marked *

error: Content is protected !!