ಕುಂಭಮೇಳ ಸಾವಿನ ಸಂಖ್ಯೆಯನ್ನು ಸಿಎಂ ಯೋಗಿ ಮುಚ್ಚಿಡುತ್ತಿದ್ದಾರೆ: ಅಖಿಲೇಶ್ ಆರೋಪ
ಮಹಾ ಕುಂಭಮೇಳದಲ್ಲಿ ಕಾಲ್ತುಳಿತದಿಂದ ಮೃತಪಟ್ಟವರ ಸಂಖ್ಯೆಯನ್ನು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಮುಚ್ಚಿಡುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಗಂಭೀರ ಆರೋಪ ಮಾಡಿದ್ದಾರೆ. ಮಹಾಕುಂಭದಲ್ಲಿ ಗಾಯಗೊಂಡ ಭಕ್ತರಿಗೆ ವೈದ್ಯಕೀಯ ಸೇವೆ, ಆಹಾರ ಮತ್ತು ಬಟ್ಟೆಗಳನ್ನು ಒದಗಿಸುವಂತೆ ಅವರು ಉತ್ತರ ಪ್ರದೇಶ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮಹಾಕುಂಭದ ಸಂಗಮ ಪ್ರದೇಶದಲ್ಲಿ ಲಕ್ಷಾಂತರ ಯಾತ್ರಾರ್ಥಿಗಳು ಪವಿತ್ರ ಸ್ನಾನ ಮಾಡಲು ಆಗಮಿಸಿದ್ದ ವೇಳೆ ನೂಕುನುಗ್ಗಲಿನಿಂದ ಉಂಟಾದ ಕಾಲ್ತುಳಿತದಲ್ಲಿ ಕನಿಷ್ಠ 30 ಜನರು ಸಾವಿಗೀಡಾಗಿದ್ದರು. 60 ಜನರು ಗಾಯಗೊಂಡಿದ್ದರು. ಈ ಸಂಬಂಧ ಎಕ್ಸ್ ಮೂಲಕ ರಾಜ್ಯ ಸರ್ಕಾರಕ್ಕೆ ಸಲಹೆಗಳನ್ನು ನೀಡಿರುವ ಅಖಿಲೇಶ್ ಯಾದವ್, ರಾಜ್ಯದಾದ್ಯಂತ ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬ್ಬಂದಿಯನ್ನು ದೂರದ ಪ್ರದೇಶಗಳಲ್ಲಿ ಸಿಲುಕಿರುವ ಜನರಿಗೆ ಚಿಕಿತ್ಸೆ ನೀಡಲು ಕಳುಹಿಸಬೇಕು. ಹಗಲು– ರಾತ್ರಿ ಊಟ ಮತ್ತು ಕುಡಿಯುವ ನೀರಿನ ಸೌಲಭ್ಯಕ್ಕಾಗಿ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಔಷಧಿ ಅಂಗಡಿಗಳು ದಿನದ ಇಪ್ಪತ್ತನಾಲ್ಕು ಗಂಟೆ ತೆರೆಯಲು ಅವಕಾಶ ನೀಡಬೇಕು. ಯಾತ್ರಾರ್ಥಿಗಳಿಗೆ ಬಟ್ಟೆ, ಹೊದಿಕೆ ನೀಡಬೇಕು ಎಂದೂ ಒತ್ತಾಯಿಸಿದ್ದಾರೆ.