ಕಾಂಗ್ರೆಸ್ ಅಧ್ಯಕ್ಷ ಹುದ್ದೆ: ಸ್ಪರ್ಧೆಯಿಂದ ಹಿಂದೆ ಸರಿಯಲ್ಲ ಎಂದ ಶಶಿ ತರೂರ್

ಹೊಸದಿಲ್ಲಿ:ಕಾಂಗ್ರೆಸ್ ಸಂಸದ ಶಶಿ ತರೂರ್ ಹಾಗೂ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿದ್ದಾರೆ. ಖರ್ಗೆ ಗಾಂಧಿ ಕುಟುಂಬದ ಆಯ್ಕೆಯೇ ಹಾಗೂ ಅವರ ನೆಚ್ಚಿನ ಅಭ್ಯರ್ಥಿಯೇ? ಎಂಬ ಗುಸುಗುಸು ಕೇಳಿಬರುತ್ತದೆ. ಆದರೆ ನನ್ನನ್ನು ಬೆಂಬಲಿಸುವವರಿಗೆ ದ್ರೋಹ ಬಗೆಯುವುದಿಲ್ಲ. ಹೀಗಾಗಿ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಎಂದು ತರೂರ್ ಸ್ಪಷ್ಟಪಡಿಸಿದ್ದಾರೆ.
ಅಧಿಸೂಚನೆಯನ್ನು ಕಳುಹಿಸಿದ ಕೆಲವೇ ದಿನಗಳಲ್ಲಿ ತರೂರ್ ಅವರು ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ಘೋಷಿಸಿದ್ದರು, ಆದರೆ ರಾಜಸ್ಥಾನದಲ್ಲಿ ಬಿಕ್ಕಟ್ಟು, ಅಶೋಕ್ ಗೆಹ್ಲೋಟ್ ಅವರು ಸೋನಿಯಾ ಗಾಂಧಿಯವರ ಕ್ಷಮೆಯಾಚಿಸಿ “ನೈತಿಕ ಹೊಣೆ ಹೊತ್ತುಕೊಂಡು ಸ್ಪರ್ಧೆಯಿಂದ ಹಿಂದೆ ಸರಿದ ಬಳಿಕ ಖರ್ಗೆ ತಡವಾಗಿ ಚುನಾವಣಾ ಕಣಕ್ಕೆ ಪ್ರವೇಶಿಸಿದರು.
ಖರ್ಗೆ ನಾಮಪತ್ರ ಸಲ್ಲಿಕೆಯ ವೇಳೆ ಅನೇಕ ಪ್ರಮುಖ ನಾಯಕರು ಹಾಜರಾಗಿದ್ದರು, ಆದರೆ ಇದಕ್ಕೆ ತದ್ವಿರುದ್ಧವಾಗಿ, ತರೂರ್ ನಾಮಪತ್ರ ಸಲ್ಲಿಕೆಯ ವೇಳೆ ಪಕ್ಷದ ಕಾರ್ಯಕರ್ತರು ಇದ್ದರು.
ಖರ್ಗೆ ಅವರು ಪಕ್ಷದ ಹೈಕಮಾಂಡ್‌ನ “ಅಧಿಕೃತ ಅಭ್ಯರ್ಥಿ” ಯೇ ಎಂದು ತರೂರ್ ಅವರನ್ನು ಕೇಳಲಾಯಿತು.
“ನಾನು ಗಾಂಧಿ ಕುಟುಂಬದ ಮೂವರನ್ನೂ (ಸೋನಿಯಾ, ರಾಹುಲ್ ಮತ್ತು ಪ್ರಿಯಾಂಕಾ) ಭೇಟಿ ಮಾಡಿದ್ದೇನೆ. ಪಕ್ಷದ ಅಧ್ಯಕ್ಷರ ಚುನಾವಣೆಯಲ್ಲಿ ಅಧಿಕೃತ ಅಭ್ಯರ್ಥಿ ಇಲ್ಲ ಹಾಗೂ ಅಂತಹ ಅಭ್ಯರ್ಥಿ ಇರುವುದಿಲ್ಲ ಎಂದು ಅವರು ನನಗೆ ಪದೇ ಪದೇ ಹೇಳಿದರು. ಅವರು ಉತ್ತಮ ಮತ್ತು ನ್ಯಾಯಯುತ ಚುನಾವಣೆಯನ್ನು ಬಯಸುತ್ತಾರೆ. ಗಾಂಧಿ ಕುಟುಂಬವು ತಟಸ್ಥವಾಗಿರುತ್ತದೆ ಮತ್ತು ಪಕ್ಷವು ನಿಷ್ಪಕ್ಷಪಾತವಾಗಿರುತ್ತದೆ. ಅವರು ಉತ್ತಮ ಚುನಾವಣೆ ಹಾಗೂ ಪಕ್ಷವನ್ನು ಬಲಪಡಿಸಲು ಬಯಸುತ್ತಾರೆ. ಪಕ್ಷದ ಅಧ್ಯಕ್ಷರು ನನಗೆ ಭರವಸೆ ನೀಡಿದ ನಂತರ ನನಗೆ ಯಾವುದೇ ಅನುಮಾನವಿಲ್ಲ” ಎಂದು ತರೂರ್ ಹೇಳಿದರು .
ಚುನಾವಣೆಯು ಅವಿರೋಧವಾಗಿ ನಡೆಯುವುದೆ? ಎಂದು ಕೇಳಿದಾಗ, “ನನ್ನ ಮೇಲೆ ವಿಶ್ವಾಸ ವಿಟ್ಟಿರುವ ಹಾಗೂ ಬೆಂಬಲಿಸುತ್ತಿರುವ ಹಲವಾರು ಜನರಿಗೆ ನಾನು ಹೇಗೆ ದ್ರೋಹ ಬಗೆಯಲಿ ಎನ್ನುವುದು ನನ್ನ ಪ್ರಶ್ನೆ. ಸ್ಪರ್ಧಿಸುವಂತೆ ಕಾರ್ಯಕರ್ತರೇ ನನಗೆ ಹೇಳಿದ್ದಾರೆ. ಅವರನ್ನು ನಾನು ಬಿಡಲಾರೆ. ಕಾಂಗ್ರೆಸ್ ನ ಸಾಮಾನ್ಯ ಕಾರ್ಯಕರ್ತರು ಪಕ್ಷದಲ್ಲಿ ಬದಲಾವಣೆ ಬಯಸುತ್ತಿದ್ದಾರೆ. ನಾನು ಅವರ ಧ್ವನಿಯಾಗಲು ಬಯಸುವೆ. ಪಕ್ಷದ ಜನರು ನನಗೆ ಬೆಂಬಲಿಸುತ್ತಿದ್ದಾರೆ” ಎಂದರು.