ಪಿಸ್ತಾದ ಸಿಪ್ಪೆ ಗಂಟಲಲ್ಲಿ ಸಿಲುಕಿ ಎರಡು ವರ್ಷದ ಮಗು ಮೃತ್ಯು
ಕಾಸರಗೋಡು: ಪಿಸ್ತಾದ ಸಿಪ್ಪೆ ಗಂಟಲಲ್ಲಿ ಸಿಲುಕಿ ಎರಡು ವರ್ಷದ ಮಗುವೊಂದು ಮೃತಪಟ್ಟ ಘಟನೆ ಕೇರಳದಲ್ಲಿ ನಡೆದಿದೆ. ಕಾಸರಗೋಡು ಜಿಲ್ಲೆಯ ಕುಂಬಳೆ ಎಂಬಲ್ಲಿ ಶನಿವಾರ ಈ ಘಟನೆ ನಡೆದಿದೆ.

ಮೃತಪಟ್ಟ ಮಗುವನ್ನು ಕುಂಬಳೆ ಭಾಸ್ಕರನಗರದ ನಿವಾಸಿ ಅನ್ವರ್- ಮೆಹರೂಫಾ ದಂಪತಿ ಪುತ್ರ ಅನಸ್ ಎಂದು ಗುರುತಿಸಲಾಗಿದೆ. ಪಿಸ್ತಾವನ್ನು ತಿನ್ನುತ್ತಿದ್ದಾಗ ಸಿಪ್ಪೆ ಗಂಟಲಲ್ಲಿ ಸಿಲುಕಿದ್ದು, ಮನೆಯವರು ಸಿಪ್ಪೆಯ ಒಂದು ತುಂಡನ್ನು ಹೊರ ತೆಗೆದಿದ್ದರು. ಬಳಿಕ ಬಾಲಕನನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ವೈದ್ಯರು ತಪಾಸಣೆ ನಡೆಸಿದಾಗ ಗಂಟಲಲ್ಲಿ ಯಾವುದೇ ವಸ್ತುಗಳು ಸಿಲುಕಿಲ್ಲ ಎಂದು ತಿಳಿಸಿದ್ದರಿಂದ ಮನೆಗೆ ಕರೆದುಕೊಂಡು ಬರಲಾಗಿತ್ತು ಎಂದು ತಿಳಿದುಬಂದಿದೆ.
ಆದರೆ, ಭಾನುವಾರ ಬೆಳಿಗ್ಗೆ ಬಾಲಕನಿಗೆ ಉಸಿರಾಟದ ತೊಂದರೆ ಉಂಟಾಗಿದೆ. ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲಾಗಲಿಲ್ಲ. ಬಾಕಿಯುಳಿದಿದ್ದ ಪಿಸ್ತಾದ ಸಿಪ್ಪೆ ಶ್ವಾಸಕೋಶದಲ್ಲಿ ಉಳಿದಿದ್ದರಿಂದಾಗಿ ಮಗು ಉಸಿರಾಟದ ಸಮಸ್ಯೆಗೆ ತುತ್ತಾಗಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.