ಲಾರಿ ಮಾಲಕ ಮನಾಫ್ ವಿರುದ್ಧ ಅರ್ಜುನ್ ಕುಟುಂಬದ ಸದಸ್ಯರ ಆರೋಪ
ಶಿರೂರು ಭೂ ಕುಸಿತದ ವೇಳೆ ಲಾರಿ ಸಮೇತ ಕಣ್ಮರೆಯಾಗಿದ್ದ ಕೇರಳದ ಅರ್ಜುನ್ ಮೃತದೇಹ 72 ದಿನಗಳ ಬಳಿಕ ಗಂಗಾವಳಿ ನದಿಯಲ್ಲಿ ಸಿಕ್ಕಿದ್ದು ಬಳಿಕದ ಬೆಳವಣಿಗೆಯಲ್ಲಿ ಲಾರಿಯ ಮಾಲಕ ಮನಾಫ್ ವಿರುದ್ದ ಅರ್ಜುನ್ ಕುಟುಂಬಸ್ಥರು ಆರೋಪವೊಂದನ್ನು ಹೊರಿಸಿರುವುದಾಗಿ ವರದಿಯಾಗಿದೆ.
ಅರ್ಜುನ್ ಸಾವನ್ನು ಲಾರಿ ಮಾಲಕ ಮನಾಫ್ ತಮ್ಮ ವೈಯಕ್ತಿಕ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಅರ್ಜುನ್ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ ಎನ್ನಲಾಗಿದ್ದು ಒಂದು ವೇಳೆ ನಮ್ಮ ಕುಟುಂಬದ ದುಃಖದ ಲಾಭವನ್ನು ಪಡೆಯುವುದನ್ನೇನಾದರೂ ಮುಂದುವರಿಸಿದರೆ, ಕಾನೂನು ಕ್ರಮದ ಆಯ್ಕೆಯನ್ನು ಪರಿಶೀಲಿಸಲಾಗುವುದು ಎಂದೂ ಮನಾಫ್ ಗೆ ಅರ್ಜುನ್ ಕುಟುಂಬದ ಸದಸ್ಯರು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ಆದರೆ, ಅರ್ಜುನ್ ಕುಟುಂಬದ ಸದಸ್ಯರು ಮಾಡಿರುವ ಆರೋಪವನ್ನು ಲಾರಿ ಮಾಲಕ ಮನಾಫ್ ಅಲ್ಲಗಳೆದಿದ್ದು ನಾನೇನಾದರೂ ತಪ್ಪು ಮಾಡಿಲ್ಲ, ನನ್ನನ್ನು ಅಪರಾಧಿಯನ್ನಾಗಿಸಲು ಯಾರು ಏನೇ ಪ್ರಯತ್ನ ಪಟ್ಟರೂ, ನಾನು ಮಾಡಿದ್ದು ಎಂದಿಗೂ ಉಳಿಯಲಿದೆ, ಕೆಲವರು ಅರ್ಜುನ್ ಕುಟುಂಬವನ್ನು ದಾರಿ ತಪ್ಪಿಸಿದ್ದಾರೆ. ಏನಾದರೂ ಆಗಲಿ, ನಾನು ಲಾರಿಗೆ ಅರ್ಜುನ್ ಹೆಸರಿಡುತ್ತೇನೆ. ನನಗೆ ಅರ್ಜುನ್ ಕುಟುಂಬದ ವಿರುದ್ಧ ಯಾವುದೇ ಹಗೆತನವಿಲ್ಲ” ಎಂದು ಮನಾಫ್ ಹೇಳಿದ್ದಾರೆ.
ಲಾರಿ ಮಾಲಕ ಮನಾಫ್, ನನಗೆ ನನ್ನ ಲಾರಿ ಬೇಡ; ಬದಲಿಗೆ ಅರ್ಜುನ್ ನ ಕಳೇಬರವನ್ನು ಆತನ ಕುಟುಂಬಕ್ಕೆ ಹಸ್ತಾಂತರಿಸಿದರೆ ಸಾಕು ಎಂದು ಭಾವನಾತ್ಮಕ ಮನವಿ ಮಾಡಿದ್ದರು. ಇದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿ ಮೆಚ್ಚುಗೆ ಪಡೆದಿತ್ತು. ಇದೀಗ ಕುಟುಂಬಸ್ಥರ ಆರೋಪ ಚರ್ಚೆಗೆ ಕಾರಣವಾಗಿದೆ.