ಮಣಿಕ್ಕರ ಸರಕಾರಿ ಹಿ ಪ್ರಾ ಶಾಲಾ ನೂತನ ಕೊಠಡಿ ಉದ್ಘಾಟನೆ, ವಾರ್ಷಿಕೋತ್ಸವ
ಪುತ್ತೂರು: ಶಾಲೆಗಳು ಮತ್ತು ದೇವಸ್ಥಾನಗಳಲ್ಲಿ ರಾಜಕೀಯ ಮಾಡಬಾರದು, ಈ ಎರಡು ಕ್ಷೇತ್ರದಲ್ಲಿ ರಾಜಕೀಯ ಮಾಡಿದ್ರೆ ಅದು ಎಂದೂ ಉದ್ದಾರ ಆಗಲು ಸಾಧ್ಯವಿಲ್ಲ. ಇದನ್ನು ಶಾಸಕನಾಗಿ ನಾನು ಸಹಿಸುವುದೇ ಇಲ್ಲ, ಶಾಲೆಯಲ್ಲಿ ಪಾಠ ಮಾಡುವ ಶಿಕ್ಷಕರು ರಾಜಕೀಯ ಮಾಡಿ ಮಕ್ಕಳ ಭವಿಷ್ಯವನ್ನು ಹಾಳು ಮಾಡಬೇಡಿ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಅವರು ಕೊಳ್ತಿಗೆ ಗ್ರಾಮದ ಮಣಿಕ್ಕರ ಸರಕಾರಿ ಹಿ ಪ್ರಾ ಶಾಲೆಲ್ಲಿ ನೂತನ ಕೊಠಡಿ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಣಿಕ್ಕರ ಶಾಲೆ ಒಂದು ಕಾಲದಲ್ಲಿ ಬೀಳುವ ಹಂತದಲ್ಲಿತ್ತು. ಮಕ್ಕಳು ಮರದಡಿ ಕುಳಿತು ಪಾಠ ಕೇಳುತ್ತಾರೆಂದು ಮಾಧ್ಯಮದಲ್ಲಿ ವರದಿಯಾಗಿತ್ತು. ಆಗ ನಾನು ಶಾಸಕನಾಗಿರಲಿಲ್ಲ. ಡಿ ವಿ ಸದಾನಂದ ಗೌಡರ ಜೊತೆ ಮಾತನಾಡಿ ಶಾಲೆಗೆ ಕೊಠಡಿ ಮಂಜೂರು ಮಾಡಿಸಿದ್ದೆ. ಮಣಿಕ್ಕರ ಶಾಲೆಯ ಪಕ್ಕದಲ್ಲೇ ಮಾಜಿ ಸಂಸದ ನಳಿನ್‌ಕುಮಾರ್ ಕಟೀಲ್ ತವರು ಮನೆ ಇದೆ ಆದರೂ ಶಾಲೆಯ ಅವಸ್ಥೆ ಕಂಗೆಟ್ಟಿತ್ತು ಎಂದು ಹೇಳಿದರು.
ಸದ್ಯ ಈ ಶಾಲೆಯಲ್ಲಿ 64 ಮಕ್ಕಳಿದ್ದಾರೆ. ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾದ್ಯಮ ಶಿಕ್ಷಣ ಆರಂಭಿಸದೇ ಇದ್ದಲ್ಲಿ ಮಕ್ಕಳ ಸಂಖ್ಯೆ ಇನ್ನೂ ಕಡಿಮೆಯಾಗುವ ಸಂಭವ ಇದೆ. ಈ ಶಾಲೆಯಲ್ಲಿ ಆಂಗ್ಲ ಮಾದ್ಯಮವನ್ನು ಆರಂಭಿಸುವ ಮೂಲಕ ಶಾಲೆಯನ್ನು ಉಳಿಸುವ ಕೆಲಸ ಮಾಡಬೇಕು. ಕನ್ನಡದ ಜೊತೆ ಆಂಗ್ಲ ಭಾಷೆಯೂ ಅತೀ ಅಗತ್ಯವಾಗಿದೆ. ಮಕ್ಕಳ ವಿದ್ಯೆಯ ಅಡಿಪಾಯ ಅದು ಉತ್ತಮವಾಗಿದ್ದಲ್ಲಿ ಮಾತ್ರ ಮಕ್ಕಳ ಭವಿಷ್ಯ ಚೆನ್ನಾಗಿ ರೂಪುಗೊಳ್ಳುತ್ತದೆ. ಪೋಷಕರು ಶಾಲೆಯ ಜೊತೆ ಸಂಬಂಧ ಇರಿಸಿಕೊಳ್ಳಬೇಕು ಎಂದು ಶಾಸಕರು ಹೇಳಿದರು. ಮಣಿಕ್ಕರ ಶಾಲೆಯಲ್ಲಿ ಈಗ ಕೊಠಡಿ ಕೊರತೆ ಇಲ್ಲ ಮಕ್ಕಳ ಕೊರತೆ ಇದೆ ಶಿಕ್ಷಕರು , ಪೋಷಕರು ಸೇರಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸುವ ಕೆಲಸ ಮಾಡಬೇಕು ಎಂದು ಶಾಸಕರು ಸೂಚನೆ ನೀಡಿದರು.
ಶಿಷ್ಟಾಚಾರ ಉಲ್ಲಂಘಟನೆ ಮುಖ್ಯ ಶಿಕ್ಷಕಿ ವಿರುದ್ದ ಕ್ರಮಕ್ಕೆ ಸೂಚನೆ: ಮಣಿಕ್ಕರ ಸರಕಾರಿ ಶಾಲೆಯ ನೂತನ ಕೊಠಡಿಯನ್ನು ಮಾಜಿ ಶಾಸಕರು ಬಂದು ಉದ್ಘಾಟನೆ ಮಾಡಿದ್ದಾರೆ, ಇದಕ್ಕೆ ಅವಕಾಶ ನೀಡಿದ ಮುಖ್ಯ ಶಿಕ್ಷಕಿ ವಿರುದ್ದ ಶಿಸ್ತು ಕ್ರಮಕೈಗೊಳ್ಳುವಂತೆ ಶಾಸಕರಾದ ಅಶೋಕ್ ರೈ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಶಾಲೆಗೆ ಖಾಸಗಿ ಸಹಭಾಗಿತ್ವದಲ್ಲಿ ಮಂಜೂರಾಗಿದ್ದ ಕೊಠಡಿಯನ್ನು ಮಾಜಿ ಶಾಸಕರಿಗೆ ಉದ್ಘಾಟನೆ ಮಾಡುವ ಅಧಿಕಾರ ಇಲ್ಲ. ಈ ವಿಚಾರ ಮಾಜಿ ಶಾಸಕರಿಗೆ ಗೊತ್ತಿದ್ದರೂ ಉದ್ಘಾಟನೆ ಮಾಡಿದ್ದಾರೆ, ಯಾರೋ ಮಾಡಿದ ಕೆಲಸವನ್ನು ಉದ್ಘಾಟನೆ ಮಾಡಲು ಅವರಿಗೆ ಯಾಕೆ ಅಷ್ಟೊಂದು ಹುಮ್ಮಸ್ಸು ಎಂದು ನನಗೆ ಗೊತ್ತಿಲ್ಲ. ತನ್ನ ಕ್ಷೇತ್ರದ ಯಾವುದೇ ಕಾರ್ಯಕ್ರಮವಾಗಲಿ ಅದು ಆಯಾ ಕ್ಷೇತ್ರ ಶಾಸಕರ ವ್ಯಾಪ್ತಿಗೆ ಒಳಪಡುತ್ತದೆ. ಇಲ್ಲಿನ ಶಿಕ್ಷಕಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ಮಾಜಿ ಶಾಸಕರು ಯತ್ನಿಸಿದ್ದಾರೆ. ಸಂಸದರೋ, ಶಾಲೆಯ ಕಾರ್ಯಾಧ್ಯಕ್ಷರೋ, ಗ್ರಾ.ಪಂ ಅಧ್ಯಕ್ಷರೋ ಉದ್ಘಾಟಿಸಿದರೆ ಅದು ಶಿಷ್ಟಾಚಾರ ಉಲ್ಲಂಘನೆಯಾಗುತ್ತಿರಲಿಲ್ಲ. ಶಿಷ್ಟಾಚಾರ ಉಲ್ಲಂಘನೆ ಮಾಡಿದ ಮುಖ್ಯ ಶಿಕ್ಷಕಿಯನ್ನು ಅಮಾನತು ಮಾಡುವಂತೆ ಸೂಚನೆ ನೀಡುತ್ತಿದ್ದೆ. ಆದರೆ ಮಾನವೀಯ ನೆಲೆಯಲ್ಲಿ ಅವರ ವಿರುದ್ದ ಸದ್ಯ ಶಿಸ್ತುಕ್ರಮಕ್ಕೆ ಸೂಚನೆ ನೀಡಿದ್ದೇನೆ. ಎಂದು ಶಾಸಕರಾದ ಅಶೋಕ್ ರೈ ತಿಳಿಸಿದರು. ಇದೇ ವೇಳೆ ಶಿಕ್ಷಕಿ, ಅವರು ಬಂದು ಉದ್ಘಾಟನೆ ಮಾಡಿದ್ದಾರೆ ನಾನೇನು ಮಾಡುವಂತಿರಲಿಲ್ಲ ನನ್ನಿಂದ ತಪ್ಪಾಗಿದೆ ಕ್ಷಮಿಸಿ ಎಂದು ಕೇಳಿಕೊಂಡ ಘಟನೆಯೂ ನಡೆಯಿತು.
ಕೊಳ್ತಿಗೆ ಗ್ರಾಪಂ ಅಧ್ಯಕ್ಷೆ ಅಕ್ಕಮ್ಮ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಪ್ರಮೋದ್ ಕೆ ಎಸ್, ಸದಸ್ಯೆ ಶುಭಲತಾ, ಸುಂದರ, ದಾನಿಗಳದ ಸುನಿಲ್, ಜಗನ್ನಾಥ ರೈ, ಎಸ್‌ಡಿಎಂಸಿ ಅಧ್ಯಕ್ಷರಾದ ಮಹಮ್ಮದ್, ಮುಖ್ಯ ಶಿಕ್ಷಕಿ ವಿಶಾಲಾಕ್ಷಿ, ಪ್ರೌಢ ಶಾಲೆಯ ಕಾಯಾಧ್ಯಕ್ಷರಾದ ಗಫೂರ್ ಸಾಹೆಬ್, ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ನಿಳಿನಿ, ಹಾರಾಡಿ ಶಾಲೆಯ ಮುಖ್ಯ ಶಿಕ್ಷಕ ಕೆ ಕೆ ಮಾಸ್ಟರ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ವಿಶಾಲಾಕ್ಷಿ ಸ್ವಾಗತಿಸಿ ವಂದಿಸಿದರು.