ಸಿ.ಟಿ.ರವಿ ಮೆರವಣಿಗೆ ವೇಳೆ ಆ್ಯಂಬುಲೆನ್ಸ್‌ಗಳ ದುರ್ಬಳಕೆ ಆರೋಪ: ಚಾಲಕರು, ಮಾಲಕರ ವಿರುದ್ಧ ಎಫ್‍ಐಆರ್
ಚಿಕ್ಕಮಗಳೂರು: ಡಿ.21ರಂದು ರಾತ್ರಿ ಸಿ.ಟಿ ರವಿ ಚಿಕ್ಕಮಗಳೂರು ನಗರಕ್ಕೆ ಆಗಮಿಸಿದ್ದ ಈ ವೇಳೆ ಕಾರ್ಯಕರ್ತರು ಮೆರವಣಿಗೆ ಮಾಡಿದ್ದು ಈ ವೇಳೆ ಆ್ಯಂಬುಲೆನ್ಸ್‌ಗಳ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ 7 ಆ್ಯಂಬುಲೆನ್ಸ್ ಚಾಲಕರು ಮತ್ತು ಮಾಲಕರ ಮೇಲೆ ಎಫ್‍ಐಆರ್ ದಾಖಲಾಗಿದೆ.
ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶನಿವಾರ ರಾತ್ರಿ ಸಿ.ಟಿ.ರವಿ ನಗರಕ್ಕೆ ಆಗಮಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಮೆರವಣಿಗೆಯಲ್ಲಿ ಅವರನ್ನು ಕರೆತಂದಿದ್ದಾರೆ. ಮೆರವಣಿಗೆ ಸಾಗಿ ಬರುತ್ತಿದ್ದ ಮಾರ್ಗದಲ್ಲಿ ಆ್ಯಂಬುಲೆನ್ಸ್ ಗಳ ಟಾಪ್ ಲೈಟ್ ಆನ್ ಮಾಡಿ ಸಂಚಾರ ನಿಯಮ ಉಲ್ಲಂಘನೆ ಮಾಡಲಾಗಿದೆ. ಆ್ಯಂಬುಲೆನ್ಸ್‌ನಲ್ಲಿ ರೋಗಿಗಳಿಲ್ಲದಿದ್ದರೂ ಕರ್ಕಶ ಹಾರ್ನ್ ಹಾಕಿ ಜನರಲ್ಲಿ ಭೀತಿ ಹುಟ್ಟಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಚಿಕ್ಕಮಗಳೂರು ನಗರಠಾಣೆ ಪೊಲೀಸರು ಎಫ್‍ಐಆರ್ ದಾಖಲಿಸಿದ್ದು, ಮೋಟಾರು ವಾಹನ ಕಾಯ್ದೆ ಉಲ್ಲಂಘನೆ, ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ ಆರೋಪದ ಮೇರೆಗೆ ಆ್ಯಂಬುಲೆನ್ಸ್‌ಗಳ ಚಾಲಕರು, ಮಾಲಕರ ಮೇಲೆ ಎಫ್‍ಐಆರ್ ದಾಖಲಾಗಿದೆ.