ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿ ಕುಂಬ್ರದಲ್ಲಿ ಎಸ್ ಡಿ ಪಿ ಐ ಪ್ರತಿಭಟನೆ
ಪುತ್ತೂರು: ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್‌ರನ್ನು ಅವಮಾನ ಮಾಡಿರುವ ವಿಚಾರಕ್ಕೆ ಸಂಬಂಧಿಸಿ ಎಸ್‌ಡಿಪಿಐ ಕುಂಬ್ರ ಬ್ಲಾಕ್ ವತಿಯಿಂದ ಕುಂಬ್ರ ಜಂಕ್ಷನ್‌ನಲ್ಲಿ ಡಿ.21ರಂದು ರಾತ್ರಿ ಪ್ರತಿಭಟನೆ ನಡೆಯಿತು.
ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಸಮಿತಿ ಉಪಾಧ್ಯಕ್ಷ ಹಮೀದ್ ಸಾಲ್ಮರ ಮಾತನಾಡಿ ಅಂಬೇಡ್ಕರ್ ಅವರಿಗೆ ಮಾಡುವ ಅವಮಾನವನ್ನು ದೇಶದ ಸಂವಿಧಾನ ಪ್ರೇಮಿಗಳು ಯಾವತ್ತೂ ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿ (ಪ್ರೊ.ಕೃಷ್ಣಪ್ಪ ಸ್ಥಾಪಿತ) ಮುಖಂಡರಾದ ಉದಯ ಕುಮಾರ್ ಕೆಯ್ಯೂರು ಮಾತನಾಡಿ ದೇಶಕ್ಕೆ ಸಂವಿಧಾನವನ್ನು ನೀಡಿದ ಬಾಬಾ ಸಾಹೇಬ್ ಅಂಬೇಡ್ಕರ್‌ರವರನ್ನು ಅವಮಾನ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾರವರ ನಡೆ ಖಂಡನೀಯ, ಅಂಬೇಡ್ಕರ್ ಬರೆದ ಸಂವಿಧಾನದಿಂದಾಗಿ ಇಂದು ಅಮಿತ್ ಶಾ ಗೃಹ ಸಚಿವ ಸ್ಥಾನದಲ್ಲಿರುವುದು ಎಂಬುದನ್ನು ಮರೆಯಬಾರದು ಎಂದು ಹೇಳಿದರು.
ಎಸ್‌ಡಿಪಿಐ ಕುಂಬ್ರ ಬ್ಲಾಕ್ ಅಧ್ಯಕ್ಷ ರಿಯಾಝ್ ಬಳಕ್ಕ ಮಾತನಾಡಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಅವಮಾನ ದೇಶದ ಸಂವಿಧಾನಕ್ಕೆ ಮಾಡಿದ ಅವಮಾನವಾಗಿದೆ, ಗೃಹ ಸಚಿವ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಿ ಕ್ಷಮೆಯನ್ನು ಕೇಳಬೇಕು ಎಂದು ಆಗ್ರಹಿಸಿದರು.
ಒಳಮೊಗ್ರು ಗ್ರಾ.ಪಂ ಸದಸ್ಯ ಸಿರಾಜ್ ಪರ್ಪುಂಜ, ಕುಂಬ್ರ ಬ್ಲಾಕ್ ಉಪಾಧ್ಯಕ್ಷ ಅಶ್ರಫ್ ಸಂಟ್ಯಾರ್, ಮುಖಂಡರಾದ ಎಸ್.ಎಮ್ ಮಹಮ್ಮದ್ ಕುಂಞಿ, ರಿಯಾಝ್ ಜಾರತ್ತಾರು, ಅಶ್ರಫ್ ಪರ್ಪುಂಜ, ಅಶ್ರಫ್ ಕುರಿಯ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ಕುಂಬ್ರ ಬ್ಲಾಕ್ ಕಾರ್ಯದರ್ಶಿ ಇರ್ಶಾದ್ ಜಾರತ್ತಾರು ಸ್ವಾಗತಿಸಿ ವಂದಿಸಿದರು.