ಮಂಗಳೂರಿನಿಂದ ದಿಲ್ಲಿಗೆ ಕಾಲ್ನಡಿಗೆ ಜಾಥಾ ಮಾಡುತ್ತಿದ್ದವರಿಗೆ ಟ್ರಕ್ ಡಿಕ್ಕಿ; ಇಬ್ಬರು ಮೃತ್ಯು
ಮಂಗಳೂರು: ಮಂಗಳೂರಿನಿಂದ ದಿಲ್ಲಿಗೆ ಕಾಲ್ನಡಿಗೆ ಜಾಥಾ ಮಾಡುತ್ತಿದ್ದ ಐವರು ವಿರಾಮದ ವೇಳೆ ವಿಶ್ರಾಂತಿ ಪಡೆಯುತ್ತಿದ್ದ ಓಮ್ನಿ ಕಾರಿಗೆ ಟ್ರಕ್ ಡಿಕ್ಕಿ ಹೊಡೆದು, ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ಡಿ.11ರಂದು ನಡೆದಿದೆ.
ಗುಜರಾತ್ ನ ಸೂರತ್ ನಿಂದ 200 ಕಿ.ಮಿ. ದೂರದಲ್ಲಿ ಬುಧವಾರ ಮಧ್ಯಾಹ್ನ 2 ರ ಸುಮಾರಿಗೆ ಅಪಘಾತ ನಡೆದಿದೆ ಎಂದು ತಿಳಿದು ಬಂದಿದೆ. ಮೃತಪಟ್ಟವರ ಪೈಕಿ ಒಬ್ಬರನ್ನು ದಕ್ಷಿಣ ಕನ್ನಡ ಜಿಲ್ಲೆಯ ಚಾರ್ಮಾಡಿಯ ಮೂಸಾ ಶರೀಫ್ ಎಂದು ಗುರುತಿಸಲಾಗಿದೆ. ಇನ್ನೊಬ್ಬರು ಪ್ರವೀಣ್ ಎನ್ನಲಾಗಿದೆ. ದಾರಿ ಮಧ್ಯೆ ರಸ್ತೆ ಬದಿ ಕಾರಿನಲ್ಲಿದ್ದಾಗ ಟ್ರಕ್ ಢಿಕ್ಕಿ ಹೊಡೆದು, ಮೂಸಾ ಶರೀಫ್, ಪ್ರವೀಣ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ರಭಸಕ್ಕೆ ಓಮ್ನಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಡಿಕ್ಕಿ ಹೊಡೆದು ಟ್ರಕ್ ಪರಾರಿಯಾಗಿದೆ ಎಂದು ತಿಳಿದು ಬಂದಿದೆ.
ಅತ್ಯಾಚಾರಿಗಳಿಗೆ ತಕ್ಷಣವೇ ಶಿಕ್ಷೆಯಾಗಬೇಕು, ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳಿಗೆ ತ್ವರಿತ ಶಿಕ್ಷೆಗೆ ಆಗ್ರಹಿಸಿ ಪ್ರಧಾನಮಂತ್ರಿಯನ್ನು ಭೇಟಿಯಾಗಿ ಮನವಿ ಸಲ್ಲಿಸಲು ಐವರು ಕಾಲ್ನಡಿಗೆ ಜಾಥಾ ಹೊರಟಿದ್ದರು.
ಮೂಸಾ ಶರೀಫ್ ಅವರ ಜೊತೆ ನೌಫಲ್ ಅಬ್ಬಾಸ್, ಬಾಲಕೃಷ್ಣ, ಹಂಝ ಮತ್ತು ಪ್ರವೀಣ್ ಅವರಿದ್ದರು ಎಂದು ತಿಳಿದು ಬಂದಿದೆ. ಮೂಸಾ ಶರೀಫ್ ಅವರು ಪತ್ನಿ ಮತ್ತು ಮೂವರು ಹೆಣ್ಣುಮಕ್ಕಳು, ಕುಟುಂಬದವರನ್ನು ಅಗಲಿದ್ದಾರೆ. ಪಾದಯಾತ್ರೆಯ ಕುರಿತು ಯೂಟ್ಯೂಬ್ ನಲ್ಲಿ ತಂಡವು ವೀಡಿಯೋ ಹಂಚಿಕೊಳ್ಳುತ್ತಿದ್ದರು.