ಉಳ್ಳಾಲ: ಗ್ಯಾಸ್ ಸ್ಫೋಟ; ತಾಯಿ ಹಾಗೂ ಮೂವರು ಮಕ್ಕಳು ಗಂಭೀರ
ಮಂಗಳೂರು: ಗ್ಯಾಸ್ ಸೋರಿಕೆಯಿಂದ ಸ್ಫೋಟಗೊಂಡ ಪರಿಣಾಮ ಮನೆಯಲ್ಲಿದ್ದ ತಾಯಿ ಹಾಗೂ ಮೂವರು ಮಕ್ಕಳು ಗಂಭೀರ ಗಾಯಗೊಂಡ ಘಟನೆ ಉಳ್ಳಾಲ ತಾಲೂಕಿನ ಮಂಜನಾಡಿ ಗ್ರಾಮ ವ್ಯಾಪ್ತಿಯ ಖಂಡಿಕ ಎಂಬಲ್ಲಿ ನಡೆದಿದೆ.
ತಾಯಿ ಖುಬ್ರಾ ಹಾಗೂ ಮೂವರು ಮಕ್ಕಳಾದ ಮೆಹದಿಯಾ,ಮಝಿಯಾ ಮತ್ತು ಮಾಯಿದಾ ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದು ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಖಂಡಿಕ ನಿವಾಸಿ ಮುತ್ತಲಿಬ್ ಎಂಬವರ ಮನೆಯಲ್ಲಿ ತಾಯಿ ಮತ್ತು ಮೂವರು ಮಕ್ಕಳು ಒಂದೇ ಕೊಠಡಿಯಲ್ಲಿ ಮಲಗಿದ್ದು ಮಧ್ಯರಾತ್ರಿ ವೇಳೆ ದೊಡ್ಡ ಸದ್ದು ಕೇಳಿಸಿದೆ. ಈ ಘಟನೆಯಲ್ಲಿ ಮನೆಯ ಮೇಲ್ಛಾವಣಿ ಸಂಪೂರ್ಣ ಹಾರಿ ಹೋಗಿದೆ. ಕಿಟಕಿ, ಮಲಗಿದ ಕೊಠಡಿ ಸಂಪೂರ್ಣ ಹಾನಿಯಾಗಿದೆ.
ತಾಯಿ ಮಕ್ಕಳು ಮಲಗಿದ್ದ ಮಂಚ ಸಂಪೂರ್ಣ ಸುಟ್ಟು ಕರಕಲಾಗಿವೆ. ಈ ಸಂದರ್ಭ ತಾಯಿ ಜೊತೆ ಮಲಗಿದ್ದ ದೊಡ್ಡ ಮಗಳು ಬಾಗಿಲು ತೆರೆದಿದ್ದು, ತಕ್ಷಣ ಸುಟ್ಟ ಗಾಯಗಳಿಂದ ಗಂಭೀರ ಸ್ಥಿತಿಯಲ್ಲಿದ್ದ ತಾಯಿ ಹಾಗೂ ಮೂವರು ಮಕ್ಕಳನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗ್ಯಾಸ್ ಸ್ಫೋಟ ಹಿನ್ನೆಲೆ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ಭೇಟಿ ನೀಡಿ ನೀಡಿ ಪರಿಶೀಲನೆ ನಡೆಸಿದ್ದಾರೆ.