ಉಪ್ಪಿನಂಗಡಿ: ಬಿಜೆಪಿ ಪ್ರತಿಭಟನೆ ರಾಜಕೀಯ ಪ್ರೇರಿತ: ಅನಿ ಮಿನೇಜಸ್
ಪುತ್ತೂರು: 34 ನೆಕ್ಕಿಲಾಡಿ- ಬೊಳುವಾರು ರಾಜ್ಯ ಹೆದ್ದಾರಿಯ ಕಾಮಗಾರಿಯನ್ನು ಮುಂದಿಟ್ಟುಕೊಂಡು ಬಿಜೆಪಿಯವರು ಡಿ.2ರಂದು ಪ್ರತಿಭಟನೆಗೆ ಹೊರಟಿರುವುದು ರಾಜಕೀಯ ಪ್ರೇರಿತವಾಗಿದೆ. ಅವರು ಇದರ ವಿರುದ್ಧ ಪ್ರತಿಭಟನೆ ನಡೆಸುವುದಕ್ಕಿಂತ ಹಲವು ವರ್ಷಗಳಿಂದ ಆಮೆನಡಿಗೆಯಲ್ಲಿ ಸಾಗುತ್ತಿರುವ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಜನರಿಗಾಗುತ್ತಿರುವ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸಂಸದರ ವಿರುದ್ಧ ಪ್ರತಿಭಟನೆ ಮಾಡಲಿ ಎಂದು 34 ನೆಕ್ಕಿಲಾಡಿ ವಲಯ ಕಾಂಗ್ರೆಸ್ ಅಧ್ಯಕ್ಷೆ ಅನಿ ಮಿನೇಜಸ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
34 ನೆಕ್ಕಿಲಾಡಿ- ಬೊಳುವಾರು ರಾಜ್ಯ ಹೆದ್ದಾರಿಯಲ್ಲಿ ಬೇರಿಕೆಯಿಂದ ಬೊಳಂತಿಲದವರೆಗೆ ಹೆದ್ದಾರಿ ವಿಸ್ತರಣಾ ಕಾಮಗಾರಿಗೆ ನಮ್ಮ ಶಾಸಕರಾದ ಅಶೋಕ್ ಕುಮಾರ್ ರೈಯವರು 10ಕೋ.ರೂ. ಅನುದಾನ ತಂದಿದ್ದರು. ಈ ಕಾಮಗಾರಿಯಲ್ಲಿ ಸಾಕಷ್ಟು ಸಮಯ ಹೆದ್ದಾರಿ ವಿಸ್ತರಣೆಗಾಗಿ ಮಣ್ಣು ತೆಗೆಯುವುದಕ್ಕೆ ಹೋಗಿತ್ತು. ಮತ್ತೆ ರಸ್ತೆಯ ಕಾಮಗಾರಿ ತ್ವರಿತಗತಿಯಲ್ಲಿ ಸಾಗಿದರೂ, ಭಾರೀ ಮಳೆಯಿಂದಾಗಿ ಕೆಲವು ಕಡೆ ಮಾಡಿದ ಮಳೆ ನೀರಿಗೆ ಕೊಚ್ಚಿಕೊಂಡು ಹೋಗುವಂತಾಯಿತು. ಹಾಗಾಗಿ ಮಳೆಯ ಕಾರಣದಿಂದ ಸ್ಥಗಿತಗೊಂಡ ಈ ಕಾಮಗಾರಿ ನ.28ರಿಂದ ಪುನಾರಾರಂಭಗೊಂಡಿದೆ. ಇದು ಪೂರ್ಣಗೊಂಡರೇ ಬೊಳಂತಿಲ- ಬೇರಿಕೆಯವರೆಗಿರುವ ಅಷ್ಟು ವಿಸ್ತಾರವಾದ ರಸ್ತೆ ಬೊಳುವಾರು- ಗುರುವಾಯನಕೆರೆ ರಾಜ್ಯ ಹೆದ್ದಾರಿಯಲ್ಲಿ ಎಲ್ಲೂ ಕಾಣಸಿಗಲಿಕ್ಕಿಲ್ಲ. ಇದನ್ನು ಕಂಡು ಖುಷಿ ಪಡುವ ಬದಲು ರಾಜಕೀಯ ಪ್ರೇರಿತವಾಗಿ ಪ್ರತಿಭಟನೆ ನಡೆಸುವುದು ಸರಿಯಲ್ಲ. ಇವರ ಈ ರಾಜಕೀಯ ನಾಟಕಗಳನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಜನಸಾಮಾನ್ಯರಿಗೂ ಇದೆ ಎಂದರು.
ಸಂಸದರ ವಿರುದ್ಧ ಪ್ರತಿಭಟಿಸಲಿ: 34ನೆಕ್ಕಿಲಾಡಿ ವ್ಯಾಪ್ತಿಯಲ್ಲಿ ಬರುವ ರಾಜ್ಯ ಹೆದ್ದಾರಿಯ ಬಗ್ಗೆ ಬಿಜೆಪಿಯವರು ಪ್ರತಿಭಟಿಸುವ ಮೊದಲು ಹಲವು ವರ್ಷಗಳಿಂದ ಆಮೆ ನಡಿಗೆಯಲ್ಲಿ ನಡೆಯುತ್ತಿರುವ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಬಗ್ಗೆ ಪ್ರತಿಭಟನೆ ನಡೆಸಲಿ. ಇವರ ಅಪೂರ್ಣ ಹಾಗೂ ಅವೈಜ್ಞಾನಿಕ ಕಾಮಗಾರಿಗಳಿಂದಾಗಿ ಜನರಿಗೆ ಆರೋಗ್ಯದ ಸಮಸ್ಯೆ ಉಂಟಾಗಿದೆ. ಹೊಂಡ- ಗುಂಡಿಯಿಂದಾಗಿ ವಾಹನ ಸವಾರರು ಸಂಕಷ್ಟ ಪಡಬೇಕಾಗಿದೆ. ದಿನಕ್ಕೊಂದು ಕಡೆ ರಾಷ್ಟ್ರೀಯ ಹೆದ್ದಾರಿಯ ಪಥ ಬದಲಾವಣೆಯಾಗುವುದರಿಂದಾಗಿ ಹಲವು ಅಪಘಾತಗಳಿಗೂ ಕಾರಣವಾಗಿದೆ. ಇವರ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮೊನ್ನೆ ಒಬ್ಬರು ದ್ವಿಚಕ್ರ ವಾಹನ ಸವಾರರು ಬಿದ್ದು ಇದರ ಗುತ್ತಿಗೆದಾರ ಸಂಸ್ಥೆಯ ವಿರುದ್ಧ ದೂರು ನೀಡಿದ ಬಳಿಕ ಕುಮಾರಧಾರ ಸೇತುವೆಯ ಬಳಿ ತಾತ್ಕಾಲಿಕ ಡಾಮರು ಹಾಕಲಾಗಿದೆ. ಉಳಿದ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಗಳ ಸ್ಥಿತಿಯಿಂದಾಗಿ ಜನರಿಗಾಗುತ್ತಿರುವ ಸಮಸ್ಯೆ ಹೇಳತೀರದಂತಿದೆ. ಮೊದಲು ಇದನ್ನು ಸಂಸದರಿಗೆ ಹೇಳಿ ಬಗೆಹರಿಸುವ ಪ್ರಯತ್ನ ಬಿಜೆಪಿಯವರು ಮಾಡಲಿ ಎಂದಿದ್ದಾರೆ.
34ನೆಕ್ಕಿಲಾಡಿ – ಬೊಳುವಾರು ರಾಜ್ಯ ಹೆದ್ದಾರಿಯನ್ನು ಮಾದರಿ ರಸ್ತೆಯನ್ನಾಗಿ ರೂಪಿಸಬೇಕು ಎಂಬುದು ಶಾಸಕರಾದ ಅಶೋಕ್ ಕುಮಾರ್ ರೈ ಅವರ ಕನಸು. ಈ ರಸ್ತೆಯ ಅಭಿವೃದ್ಧಿಗೆ 45 ಕೋಟಿ ರೂ. ಈಗಾಗಲೇ ಮಂಜೂರಾಗಿದೆ. ಇನ್ನು ಹೆಚ್ಚುವರಿಯಾಗಿ 10 ಕೋಟಿ ರೂ.ಗೆ ಸರಕಾರಕ್ಕೆ ಶಾಸಕರು ಶಿಫಾರಸ್ಸು ಸಲ್ಲಿಸಿದ್ದಾರೆ. ಬೊಳುವಾರು- ನೆಕ್ಕಿಲಾಡಿ ಚತುಷ್ಪಥ ರಾಜ್ಯ ಹೆದ್ದಾರಿಯುದ್ದಕ್ಕೂ ವಿದ್ಯುತ್ ದೀಪ ಅಳವಡಿಸಲು 5 ಕೋ.ರೂ. ಬಿಡುಗಡೆ ಆಗಿದೆ. ಅಲ್ಲದೇ, ರಸ್ತೆಯ ಮಧ್ಯದ ಡಿವೈಡರ್‌ನಲ್ಲಿ ಹೈದ್ರಾಬಾದ್‌ನಿಂದ ತಂದು ಬೋಗನ್‌ವಿಲ್ಲಾ ಹೂವಿನ ಗಿಡಗಳನ್ನು ನೆಡುವ ಕಾಮಗಾರಿ ಹಾಗೂ ಹೆದ್ದಾರಿಯ ಎರಡೂ ಬದಿಗಳಲ್ಲಿ ಹಣ್ಣಿನ ಮರಗಳ ನಾಟಿ ಮಾಡುವ ಕಾಮಗಾರಿಯೂ ಪ್ರಗತಿಯಲ್ಲಿದೆ. ಚುನಾವಣಾ ನೀತಿ ಸಂಹಿತೆಗಳು ಹಾಗೂ ಮಳೆಯ ಕಾರಣದಿಂದ ಈ ಕಾಮಗಾರಿಗಳು ವಿಳಂಬವಾಗಿತ್ತು. ಇನ್ನು ಕಾಮಗಾರಿಗಳು ಪ್ರಗತಿಯಲ್ಲಿ ಸಾಗಲಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ಹಸೀರೀಕರಣ, ಸೌಂದರ್ಯಕರಣ ದಿಂದ ಕೂಡಿ 34 ನೆಕ್ಕಿಲಾಡಿ- ಬೊಳುವಾರು ರಾಜ್ಯ ಹೆದ್ದಾರಿಯು ಮಾದರಿ ಹೆದ್ದಾರಿಯಾಗಲಿದೆ ಎಂದು ಹೇಳಿದ್ದಾರೆ.
ಮೈಂದಡ್ಕ- ದರ್ಬೆ ರಸ್ತೆಗೂ ಅಭಿವೃದ್ಧಿ ಭಾಗ್ಯ: 34 ನೆಕ್ಕಿಲಾಡಿ ಗ್ರಾಮದ ಮೈಂದಡ್ಕ- ದರ್ಬೆ ರಸ್ತೆಯು ಕೆಲವು ವರ್ಷಗಳಿಂದ ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆಯ ಅಭಿವೃದ್ಧಿಗೆ ಅಂದು ಶಾಸಕರಾಗಿದ್ದ ವಿನಯಕುಮಾರ್ ಸೊರಕೆ, ಶಕುಂತಳಾ ಶೆಟ್ಟಿ ಅನುದಾನ ನೀಡಿ ಅಭಿವೃದ್ಧಿ ಪಡಿಸಿದ್ದರು. ಈಗ ಅಶೋಕ್ ಕುಮಾರ್ ರೈ ಶಾಸಕರಾದ ಮೇಲೆ ಆ ರಸ್ತೆಗೆ 30ಲಕ್ಷ ರೂಪಾಯಿ ಅನುದಾನ ನೀಡಿದ್ದಾರೆ. ಸದ್ಯದಲ್ಲೇ ಇದರ ಕಾಮಗಾರಿಯೂ ಆರಂಭಗೊಳ್ಳಲಿದೆ. ಈ ರಸ್ತೆಯ ಅಭಿವೃದ್ಧಿಗೆ ಅನುದಾನ ನೀಡಲು ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿ ಬಂದ ಶಾಸಕರುಗಳೇ ಆಗಬೇಕಿತ್ತು ಯಾಕೆ ಎಂಬುದನ್ನು ಬಿಜೆಪಿಯವರು ಪ್ರಶ್ನೆ ಮಾಡಿಕೊಳ್ಳಬೇಕು ಎಂದ ಅನಿ ಮಿನೇಜಸ್, ಸಂಜೀವ ಮಠಂದೂರು ಅವರು ಶಾಸಕರಾಗಿದ್ದ ಅವಧಿಯಲ್ಲಿ 34 ನೆಕ್ಕಿಲಾಡಿಯ ಗ್ರಾ.ಪಂ. ವಠಾರದಲ್ಲಿ ಉತ್ತಮ ಸ್ಥಿತಿಯಲ್ಲಿದ್ದ ಕಟ್ಟಡವನ್ನು ಕೆಡವಿ ಅಲ್ಲಿ ನೂತನ ಕಟ್ಟಡಕ್ಕೆ ತೆಂಗಿನ ಕಾಯಿ ಒಡೆದು ಹೋದರು. ಆದರೆ ಅಲ್ಲಿ ಇಂದು ಕೂಡಾ ಕಟ್ಟಡ ಮೇಲೇಳಲಿಲ್ಲ ಯಾಕೆ? ಮೈಂದಡ್ಕ ಮೈದಾನದ ಬಳಿ ಸಂಜೀವ ಮಠಂದೂರು ಅವರು ತೆಂಗಿನ ಕಾಯಿ ಒಡೆದ ಬಳಿಕ ಜೆಸಿಬಿಯಲ್ಲಿ ಒಂದು ದೊಡ್ಡ ಗುಂಡಿಯನ್ನು ತೋಡಲಾಗಿದೆ. ಇದರ ಉದ್ದೇಶ ಏನು? ಇದು ಯಾವ ಕಾಮಗಾರಿ? ಎಂದು ಬಿಜೆಪಿಗರು ಮೊದಲು ಜನರಿಗೆ ತಿಳಿಸಲಿ ಎಂದು ತಿಳಿಸಿದ್ದಾರೆ.