ಇಂದಿರಾ ಗಾಂಧಿ ಸ್ವರ್ಗದಿಂದ ಬಂದರೂ 370ನೇ ವಿಧಿಯನ್ನು ಮರುಸ್ಥಾಪಿಸಲು ಸಾಧ್ಯವಿಲ್ಲ: ಗುಡುಗಿದ ಅಮಿತ್ ಶಾ
ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್-ನ್ಯಾಷನಲ್ ಕಾನ್ಫರೆನ್ಸ್ ಸರ್ಕಾರವು ಈ ಹಿಂದೆ ರಾಜ್ಯಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ್ದಕ್ಕೆ ಖಂಡನೆ ವ್ಯಕ್ತಪಡಿಸಿದ್ದು 370ನೇ ವಿಧಿಯನ್ನು ಮರುಸ್ಥಾಪಿಸಲು ವಿಧಾನಸಭೆಯಲ್ಲಿ ನಿರ್ಣಯವನ್ನು ಮಂಡಿಸಿದ ಕೆಲವೇ ದಿನಗಳ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಇಂದಿರಾ ಗಾಂಧಿಯೇ ಸ್ವರ್ಗದಿಂದ ಕೆಳಗಿಳಿದು ಬಂದರೂ ಈ 370ನೇ ವಿಧಿಯನ್ನು ಯಾವುದೇ ಕಾರಣಕ್ಕೂ ಮರುಸ್ಥಾಪಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅಮಿತ್ ಶಾ, “ಇಂದಿರಾ ಗಾಂಧಿ ಸ್ವರ್ಗದಿಂದ ಹಿಂತಿರುಗಿದರೂ, 370ನೇ ವಿಧಿಯನ್ನು ಮರುಸ್ಥಾಪಿಸಲು ಸಾಧ್ಯವಿಲ್ಲ” ಎಂದು ಗುಡುಗಿದ್ದಾರೆ.
ಶ್ರೀನಗರದ ಲಾಲ್ ಚೌಕ್‌ಗೆ ಭೇಟಿ ನೀಡಿದಾಗ ನನಗೆ ಭಯವಾಯಿತು ಎಂಬ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಸುಶೀಲ್‌ಕುಮಾರ್ ಶಿಂಧೆ ಅವರ ಟೀಕೆಗೆ ಪ್ರತಿಕ್ರಿಯಿಸಿದ ಅಮಿತ್ ಶಾ, “ಶಿಂಧೆಯವರೇ, ನಿಮ್ಮ ಮೊಮ್ಮಕ್ಕಳೊಂದಿಗೆ ಈಗ ಕಾಶ್ಮೀರಕ್ಕೆ ಹೋಗಿ, ನಿಮಗೆ ಯಾವುದೇ ತೊಂದರೆಯಾಗುವುದಿಲ್ಲ” ಎಂದು ಹೇಳಿದರು.