‘ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ಗೆ ಪೆರುವಾಯಿ ಗ್ರಾ.ಪಂ ಅಧ್ಯಕ್ಷೆ ನಫೀಸಾ ಪೆರುವಾಯಿ ಆಯ್ಕೆ
ವಿಟ್ಲ: ಕೇರಳದ ಕನ್ನಡ ಪರ ಸಂಘಟನೆಗಳ ಒಕ್ಕೂಟವಾದ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಕೊಡಲ್ಪಡುವ “ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ”ಗೆ ಪೆರುವಾಯಿ ಗ್ರಾ.ಪಂ ಅಧ್ಯಕ್ಷೆ ನಫೀಸಾ ಪೆರುವಾಯಿ ಆಯ್ಕೆಯಾಗಿದ್ದಾರೆ. ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತದೆ.

ನ.27ರಂದು ಕೇರಳದ ತಿರುವನಂತಪುರಂ ಭಾರತ್ ಸಭಾಭವನದಲ್ಲಿ ನಡೆಯುವ ಅನಂತಪುರಿ ಗಡಿನಾಡ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ನಫೀಸಾ ಪೆರುವಾಯಿಯವರು ಸ್ವಚ್ಛ ವಾಹಿನಿ ವಾಹನವನ್ನು ಸ್ವತಃ ತಾವೇ ಚಲಾಯಿಸಿ ತ್ಯಾಜ್ಯ ವಿಲೇವಾರಿ ಮಾಡುವ ಮೂಲಕ ಗಮನ ಸೆಳೆದಿದ್ದರು. ಆ.15ರಂದು ದೆಹಲಿಯ ಕೆಂಪು ಕೋಟೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ದ.ಕ ಜಿಲ್ಲೆಯಿಂದ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು. ಇವರ ಸಾಧನೆಗೆ ಅನೇಕ ಸನ್ಮಾನಗಳು ದೊರಕಿದ್ದು ವಿವಿಧ ಸಂಘ ಸಂಸ್ಥೆಗಳನ್ನು ಇವರನ್ನು ಗೌರವಿಸಿದೆ.