ಪುತ್ತೂರು ಕಾಂಗ್ರೆಸ್ ಕಚೇರಿಯಲ್ಲಿ ಪೂಜೆ ಮಾಡಿದ ಕೇಸರಿ ಫೈರ್ ಬ್ರಾಂಡ್ ಪುರೋಹಿತ
ಕಳೆದ ಹಲವು ವರ್ಷಗಳಿಂದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಆಯುಧ ಪೂಜೆಯು ವರ್ಷಂಪ್ರತಿ ನಡೆಯುತ್ತಿದೆ. ಆದರೆ ಈ ಬಾರಿಯ ಪೂಜೆಗೆ ಬಂದಿರುವ ಪುರೋಹಿತ ವಿವಾದಕ್ಕೆ ಕಾರಣವಾಗಿದೆ. ಪೂಜೆ ಮಾಡಲು ಬಂದಿರುವ ಪುರೋಹಿತ ವ್ಯಕ್ತಿಯ ಬಗ್ಗೆ ಕರೆಸಿಕೊಂಡ ಕಾಂಗ್ರೆಸ್ ನಾಯಕರುಗಳಿಗೆ ಮಾಹಿತಿ ಇದೆಯೋ ಇಲ್ಲವೋ ಎಂಬುದು ಗೊತ್ತಾಗಿಲ್ಲ.
ಆದರೆ ಪುತ್ತೂರಿನಲ್ಲಿ ಹಲವು ಬಾರಿ ಪ್ರತಿಭಟನಾ ಸಭೆಯಲ್ಲಿ ಒಂದು ಕೋಮಿನ ವಿರುದ್ದ ಉದ್ರೇಕಕಾರಿಯಾಗಿ ಮಾತನಾಡಿದ್ದು ಪುತ್ತೂರು ನಗರ ಠಾಣೆಯಲ್ಲಿ ಅವರ ವಿರುದ್ದ ದೂರು ದಾಖಲಾಗಿತ್ತು. ಅಲ್ಪಸಂಖ್ಯಾತ ವಿರೋಧಿಯಾಗಿರುವ ಪುರೋಹಿತರನ್ನು ಕರೆಸಿ ಪೂಜೆ ಮಾಡಿಸಿಕೊಳ್ಳುವ ಅಗತ್ಯತೆ ಕಾಂಗ್ರೆಸ್‌ಗೆ ಯಾಕೆ ಬಂತು ಎಂದು ಪ್ರಶ್ನಿಸಿರುವ ಮೂಲ ಕಾಂಗ್ರೆಸ್ಸಿಗರು ಪುತ್ತೂರಿನಲ್ಲಿ ಹಲವಾರು ಪೂಜಾ ಪುರೋಹಿತರಿರುವಾಗ ವಿವಾದಿತ ವ್ಯಕ್ತಿಯನ್ನೇ ಯಾಕೆ ಕರೆಸಿ ಪೂಜೆ ಮಾಡಿಸಿದ್ದಾರೆ ಎಂಬುದನ್ನು ಅವರನ್ನು ಕರೆಸಿದವರೇ ಕಾರ್ಯಕರ್ತರಿಗೆ ಸ್ಪಷ್ಟನೆ ನೀಡಬೇಕಿದೆ ಎಂಬ ಅಗ್ರಹವೂ ವ್ಯಕ್ತವಾಗಿದೆ.
ಒಟ್ಟಿನಲ್ಲಿ ಕಾಂಗ್ರೆಸ್ ಕಚೇರಿಗೆ ವಿವಾದಿತ ಪುರೋಹಿತ ಆಗಮಿಸಿದ್ದು ನಾಯಕರುಗಳ ವಿರುದ್ದ ಕಾರ್ಯಕರ್ತರಿಗೆ ಸಂಶಯ ಮೂಡಿಸುವಂತೆ ಮಾಡಿದೆ. ಈ ಬೆಳವಣಿಗೆ ಇನ್ನು ಯಾವ ಹಂತಕ್ಕೆ ತಲುಪುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.