ಉಡುಪಿ: ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆಗೈದ ಪ್ರಕರಣ: ಪ್ರಭಾವ ಬಳಸಿ ಪ್ರಕರಣ ಹಾದಿ ತಪ್ಪಿಸುವ ಸಾಧ್ಯತೆ-ಆರೋಪ
ಉಡುಪಿ: ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆಗೈದ ಪ್ರಕರಣದಲ್ಲಿ ಆರೋಪಿ ದಿಲೀಪ್ ಹೆಗ್ಡೆಯ ತಂದೆ ತನ್ನ ಪ್ರಭಾವ ಬಳಸಿ ಪ್ರಕರಣದ ಹಾದಿ ತಪ್ಪಿಸುವ ಸಾಧ್ಯತೆ ಇದೆ ಎಂದು ಕೊಲೆಯಾದ ಬಾಲಕೃಷ್ಣ ಅವರ ಚಿಕ್ಕಮ್ಮನ ಮಗ ಪ್ರಕಾಶ್ ಆರೋಪಿಸಿದ್ದಾರೆ.
ಸೋಮವಾರ ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಕರಣದ ಪ್ರಮುಖ ಆರೋಪಿ ದಿಲೀಪ್ ನನ್ನು ರಕ್ಷಣೆ ಮಾಡಲು ಅನೇಕರು ಪೋಲಿಸ್ ಇಲಾಖೆಯ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಪ್ರತಿಮಾ ಅವರ ಮನೆಯವರಿಗೂ ಕರೆಗಳು ಬರುತ್ತಿದ್ದು, ಪ್ರಕರಣದಲ್ಲಿ ಆಸಕ್ತಿ ತೋರಿಸದಂತೆ ಬೆದರಿಕೆ ಹಾಕುತ್ತಿದ್ದಾರೆ. ಅಲ್ಲದೇ ಮಕ್ಕಳ ವಿದ್ಯಾಭ್ಯಾಸದ ಖರ್ಚನ್ನು ಭರಿಸುತ್ತೇವೆ ಎಂದು ಆಮಿಷ ಒಡ್ಡಲಾಗುತ್ತಿದೆ ಎಂದರು.
ದಿಲೀಪ್ ಹೆಗ್ಡೆಯ ತಂದೆ ತನ್ನ ಹಣದ ಪ್ರಭಾವ ಬಳಸಿ ಪ್ರಕರಣವನ್ನು ಸಂಪೂರ್ಣ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ. ತನಿಖೆಯ ದಾರಿ ತಪ್ಪಿದ್ದಲ್ಲಿ ಸಂಘ ಸಂಸ್ಥೆಗಳ ಬೆಂಬಲದೊಂದಿಗೆ ಹೋರಾಟ ನಡೆಸುತ್ತೇವೆ ಎಂದರು.
ಕಳೆದ ಮೂರು ತಿಂಗಳಿನಿಂದ ಅಣ್ಣ ಬಾಲಕೃಷ್ಣ ಅವರಿಗೆ ಪ್ರತಿಮಾ ವಿಷವುನಿಸುತ್ತಿದ್ದಳು ಎಂಬ ಮಾಹಿತಿ ಇದೆ. ಆದರೆ, ಅನಾರೋಗ್ಯಕ್ಕೆ ತುತ್ತಾಗಿದ್ದಾಗ ಚಿಕಿತ್ಸೆ ನೀಡಿದ ಮಣಿಪಾಲ, ಮಂಗಳೂರು, ಬೆಂಗಳೂರು ವೈದ್ಯರಿಗೆ ಈ ಅಂಶ ಯಾಕೆ ಗಮನಕ್ಕೆ ಬಂದಿಲ್ಲ ? ಈ ಬಗ್ಗೆ ಅನುಮಾನವಿದೆ. ವೈದ್ಯರೊಂದಿಗೆ ನಾವ್ಯಾರು ಸಂಪರ್ಕದಲ್ಲಿ ಇರಲು ಪ್ರತಿಮಾ ಬಿಟ್ಟಿರಲಿಲ್ಲ. ವೈದ್ಯರು ವಿಷದ ಅಂಶದ ಬಗ್ಗೆ ಆರೋಪಿ ಪ್ರತಿಮಾಳ ಗಮನಕ್ಕೆ ತಂದಿರಲೂಬಹುದು ಎಂಬ ಶಂಕೆಯನ್ನು ಪ್ರಕಾಶ್ ವ್ಯಕ್ತಪಡಿಸಿದ್ದರು.
ಆರೋಪಿ ಪತ್ನಿ ಪ್ರತಿಮಾಳ ಸಹೋದರ ಸಂದೀಪ್ ಮಾತನಾಡಿ, ಭಾವ ಬಾಲಕೃಷ್ಣ ಅವರ ನಿಧನದ ಬಳಿಕ ಅಂತ್ಯ ಸಂಸ್ಕಾರಕ್ಕೆ ಸಿದ್ದತೆ ನಡೆಸಲಾಗಿತ್ತು. ಈ ವೇಳೆ ಮೃತದೇಹದಲ್ಲಿ ಗಾಯದ ಗುರುತುಗಳು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ನಾವು ಒತ್ತಾಯ ಮಾಡಿದ್ದೆವು. ಬಳಿಕ ಪ್ರತಿಮಾ ನೈಜ ಸಂಗತಿಯನ್ನು ಬಾಯಿ ಬಿಟ್ಟಿದ್ದಾಳೆ ಎಂದರು.
ನನ್ನ ಆರೋಗ್ಯದಲ್ಲೂ ಕೆಲವು ತಿಂಗಳಿನಿಂದ ವ್ಯತ್ಯಾಸ ಉಂಟಾಗಿದೆ. ಸ್ನಾಯು ಸೆಳೆತ, ಕುತ್ತಿಗೆ ಭಾಗದಲ್ಲಿ ನೋವು ಆಗಾಗ ಕಾಣಿಸಿಕೊಳ್ಳುತ್ತಿದೆ. ನನಗೂ ನನ್ನ ತಂಗಿ ವಿಷವುನಿಸಿರುವ ಬಗ್ಗೆ ಅನುಮಾನವಿದ್ದು, ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕುಟುಂಬಿಕರಾದ ತಾರನಾಥ್ ಕೋಟ್ಯಾನ್, ಸಂಜೀವ ಪೂಜಾರಿ, ಶಶಿರೇಖಾ ಉಪಸ್ಥಿತರಿದ್ದರು.
ಎಸ್‌ಪಿ ಗೆ ದೂರು
ಬಾಲಕೃಷ್ಣ ಕೊಲೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸುವಂತೆ ಮತ್ತು ಪಾರದರ್ಶಕವಾಗಿ ನಡೆಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ಅರುಣ್ ಅವರಿಗೆ ಸೋಮವಾರ ಮನವಿ ಮಾಡಲಾಯಿತು. ಬಾಲಕೃಷ್ಣ ಅವರ ಕುಟುಂಬಿಕರಾದ ಪ್ರಕಾಶ್, ಸಂದೀಪ್, ಅನಿಲ್, ತಾರನಾಥ್ ಕೋಟ್ಯಾನ್, ಸಂಜೀವ ಪೂಜಾರಿ, ಶಶಿರೇಖಾ ಮೊದಲಾದವರು ಉಪಸ್ಥಿತರಿದ್ದರು.