ಸುಖಾಂತ್ಯಗೊಂಡ ಮನಾಫ್-ಅರ್ಜುನ್ ಕುಟುಂಬದ ಭಿನ್ನಾಭಿಪ್ರಾಯ
ಕರ್ನಾಟಕದ ಶಿರೂರಿನಲ್ಲಿ ಭೂಕುಸಿತದಲ್ಲಿ ಕೇರಳದ ಅರ್ಜುನ್ ಕಣ್ಮರೆಯಾಗಿ 72 ದಿನಗಳ ಬಳಿಕ ಅವರ ಮೃತದೇಹ ಲಭಿಸಿದ್ದು ಬಳಿಕದ ಬೆಳವಣಿಗೆಯಲ್ಲಿ ಲಾರಿ ಮಾಲಕ ಮನಾಫ್ ವಿರುದ್ದ ಅರ್ಜುನ್ ಕುಟುಂಬ ಪ್ರಕರಣವನ್ನು ದಾಖಲಿಸಿದ್ದರು. ಇದೀಗ ಮನಾಫ್ ಮತ್ತು ಅರ್ಜುನ್ ಕುಟುಂಬದ ಮಧ್ಯೆ ಇದ್ದ ಭಿನ್ನಾಭಿಪ್ರಾಯ ಸೌಹಾರ್ದಯುತವಾಗಿ ಬಗೆಹರಿದಿದೆ ಎಂದು ತಿಳಿದು ಬಂದಿದೆ.

ಮನಾಫ್ ತನ್ನ ಮೃತ ಸಹೋದರನ ಫೋಟೋ ಬಳಸಿಕೊಂಡು ಪ್ರಚಾರ ಪಡೆಯುತ್ತಿದ್ದಾರೆ. ನಮ್ಮ ಸ್ಥಿತಿಯನ್ನು ತನ್ನ ವೈಯಕ್ತಿಕ ಲಾಭಕ್ಕಾಗಿ ಬಳಸುತ್ತಿದ್ದಾರೆ. ನಮ್ಮನ್ನು ನಿರ್ಗತಿಕರು ಎಂದು ನಿರೂಪಿಸಿ ಹಣ ಸಂಗ್ರಹಿಸುತ್ತಿದ್ದಾರೆ. ಇದು ಕುಟುಂಬದ ಅನೇಕ ಸದಸ್ಯರಿಗೆ ನೋವುಂಟು ಮಾಡಿದೆ ಎಂದು ಆರೋಪಿಸಿ ಅರ್ಜುನ್ ಸಹೋದರಿ ಅಂಜು ನೀಡಿದ ದೂರಿನ ಆಧಾರದಲ್ಲಿ ಮನಾಫ್ ವಿರುದ್ಧ ಚೇವಾಯೂರು ಪೊಲೀಸರು ಎಫ್ ಐಆರ್ ದಾಖಲಿಸಿದ್ದರು. ಮನಾಫ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್-192(ಗಲಭೆಗೆ ಪ್ರಚೋದನೆ) ಮತ್ತು ಕೇರಳ ಪೊಲೀಸ್ ಕಾಯ್ದೆಯ ಸೆಕ್ಷನ್ 120 (O) ಅಡಿ ಪ್ರಕರಣ ದಾಖಲಾಗಿತ್ತು.
ಇದೀಗ ಮನಾಫ್ ಮತ್ತು ಅರ್ಜುನ್ ಕುಟುಂಬ ಸಾಮಾಜಿಕ ಕಾರ್ಯಕರ್ತರ ಸಮ್ಮುಖದಲ್ಲಿ ಪರಸ್ಪರ ಮಾತುಕತೆ ನಡೆಸಿ ತಮ್ಮೊಳಗಿನ ಭಿನ್ನಾಭಿಪ್ರಾಯವನ್ನು ಸರಿಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ನಾವು ಒಂದೇ ಕುಟುಂಬದವರ ರೀತಿ ಇದ್ದು ನಮ್ಮೊಳಗಿನ ಸಣ್ಣ ಭಿನ್ನಾಭಿಪ್ರಾಯವನ್ನು ಮಾತುಕತೆ ಮೂಲಕ ಬಗೆಹರಿಸಿದ್ದೇವೆ, ತಪ್ಪು ಅಭಿಪ್ರಾಯದಿಂದ ಗೊಂದಲ ಸೃಷ್ಟಿ ಆಗಿರಬಹುದು, ಆದರೆ ಎಲ್ಲವೂ ಸರಿಯಾಗಿದೆ. ಇದರ ಬಗ್ಗೆ ಹೆಚ್ಚು ಚರ್ಚೆ ನಡೆಸಲು ಇಷ್ಟ ಪಡುವುದಿಲ್ಲ. ನಮ್ಮೊಳಗೆ ಯಾವುದೇ ಗೊಂದಲ ಇಲ್ಲ ಎಂದು ಮನಾಫ್ ತಿಳಿಸಿದ್ದಾರೆ.