ಮನೆಯ ಬಾಗಿಲು ಮುರಿದು ಹಣ, ಚಿನ್ನಾಭರಣ ದೋಚಿದ ಕಳ್ಳರು
ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರು ಮನೆಯ ಬಾಗಿಲಿನ ಚಿಲಕ ಮುರಿದು ಮನೆಯಲ್ಲಿದ್ದ ನಗನಗದು ಸೇರಿದಂತೆ ಲಕ್ಷಾಂತರ ಮೌಲ್ಯದ ಸೊತ್ತುಗಳನ್ನು ದೋಚಿದ ಘಟನೆ ಬಂಟ್ವಾಳದ ಸಜೀಪಮುನ್ನೂರು ಎಂಬಲ್ಲಿ ಸೆ.23ರಂದು ಬೆಳಕಿಗೆ ಬಂದಿದೆ.
ಸಜೀಪಮುನ್ನೂರು ಗ್ರಾಮದ ನಿವಾಸಿಯಾಗಿರುವ ಜಯಲಕ್ಷ್ಮಿ ಅವರು ಸೆ.7 ರಂದು ಮನೆಗೆ ಬೀಗ ಹಾಕಿ ಪುತ್ತೂರು ತಾಲ್ಲೂಕಿನ ಸಂಟ್ಯಾರ್ ಕೈಕಾರದಲ್ಲಿರುವ ತನ್ನ ತಾಯಿ ಮನೆಗೆ ತೆರಳಿದ್ದು ಸೆಪ್ಟೆಂಬರ್ 23ರ ಸಂಜೆ ಮನೆಗೆ ಹಿಂತಿರುಗಿ ಬಂದಾಗ, ಮನೆಯ ಬಾಗಿಲಿನ ಡೋರ್ ಲಾಕ್ ಮುರಿದಿತ್ತು, ಕಿಟಕಿಯ ಸರಳನ್ನು ಬಗ್ಗಿಸಿ ಯಾರೋ ಕಳ್ಳರು ಒಳಗೆ ನುಗ್ಗಿರುವುದು ಬೆಳಕಿಗೆ ಬಂದಿದೆ, ಬಳಿಕ ಮನೆಯೊಳಗೆ ಹೋಗಿ ನೋಡಿದಾಗ ಗೋಡ್ರೇಜ್ ಮತ್ತು ಬೆಡ್ ರೂಂ ನಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಬಿದ್ದಿರುವುದು ಕಂಡುಬಂದಿದೆ, ಅಲ್ಲದೆ ಗೋಡ್ರೇಜ್ ನಲ್ಲಿ ಇಟ್ಟಿದ್ದ ಸುಮಾರು ಎರಡೂವರೆ ಪವನ್ ತೂಕದ 2 ಚಿನ್ನದ ಬಳೆಗಳು ಮತ್ತು 25000/- ನಗದನ್ನು ಕಳ್ಳರು ಕಳವು ಮಾಡಿರುವುದು ಬೆಳಕಿಗೆ ಬಂದಿದೆ.
ಕಳವಾದ ಸೊತ್ತುಗಳ ಒಟ್ಟು ಮೌಲ್ಯ 1,25,000 ರೂ ಎಂದು ಅಂದಾಜಿಸಲಾಗಿದೆ. ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.