ಮಾಡಾವು: ತಾಯಿ, ಮಗಳು ಸಂಕಷ್ಟದಲ್ಲಿ ವಾಸ್ತವ್ಯಕ್ಕೆ ಮನೆಯೇ ಇಲ್ಲ…!
ಪುತ್ತೂರು; ಸೊಂಟದ ಬಲ ಕಳೆದುಕೊಂಡು ತೆವಳುತ್ತಲೇ ಮನೆಯೊಳಗೆ ಅತ್ತಿಂದಿತ್ತ ತೆರಳುವ ಪುತ್ರಿ. ವಯೋಸಹಜವಾಗಿ ಕೆಲಸಕ್ಕೆ ತೆರಳಲು ಸಾಧ್ಯವಾಗದೇ ಮನೆಯಲ್ಲೇ ಇರುವ ತಾಯಿ. ಇವರಿಗೆ ವಾಸ್ತವ್ಯಕ್ಕೆ ಸ್ವಂತ ಮನೆಯಿಲ್ಲ. ಪಂಚಾಯಿತಿಗೆ ಸೇರಿದ ಹಳೆಯ ಕಟ್ಟಡವೊಂದರಲ್ಲೇ ಕಳೆದ ಹತ್ತು ವರ್ಷಗಳಿಂದ ದಿನದೂಡುತ್ತಿರುವ ಈ ಕುಟುಂಬದ ಕಣ್ಣೀರು ಒರೆಸುವ ಕಾರ್ಯ ನಡೆಯಬೇಕಿದೆ.
ಕೆಯ್ಯೂರು ಗ್ರಾಮದ ಮಾಡಾವು ಕಟ್ಟೆಯ ಬಳಿ ಸೀತಮ್ಮ (85) ಹಾಗೂ 55 ವರ್ಷ ಪ್ರಾಯದ ಪುತ್ರಿ ಬೇಬಿ ಕುಟುಂಬದ ಕರುಣಾಜನಕ ಬದುಕು ನೋಡಿದವರ ಕಣ್ಣನ್ನು ತೇವಗೊಳಿಸದೆ ಇರದು.
ತಾಯಿ ಮಗಳಿಬ್ಬರ ನೋವನ್ನು ಆಲಿಸುವವರೇ ಇಲ್ಲದಂತ ಪರಿಸ್ಥಿತಿ. ಸೀತಮ್ಮರ ಓರ್ವ ಪುತ್ರನ ಆರೋಗ್ಯವೂ ಸರಿಯಾಗಿಲ್ಲ. ಸೀತಮ್ಮ ಕುಟುಂಬಕ್ಕೆ ಆದಾಯ ಎಂಬುದೇ ಇಲ್ಲ. ಯಾರಾದರೂ ಸಹಾಯ ಮಾಡಿದರೆ ಒಂದು ಹೊತ್ತಿನ ಊಟ ಇಲ್ಲದೇ ಇದ್ದರೆ ಉಪವಾಸವೇ ಗತಿ ಎಂಬಂತಿದೆ.
ಮನೆಯಿಲ್ಲದ ಕಾರಣಕ್ಕೆ ಇವರಿಗೆ ಪಡಿತರ ಕಾರ್ಡು ಇಲ್ಲ, ಆಧಾರ್ ಕಾರ್ಡು ಇಲ್ಲ. ವೋಟರ್ ಐಡಿಯೂ ಇಲ್ಲ. ಇವರ ಹೆಸರಿಗೆ ಒಂದು ಸೆಂಟ್ಸ್ ಭೂಮಿಯೂ ಇಲ್ಲದ ಕಾರಣ ಇವರಿಗೆ ಯಾವುದೇ ದಾಖಲೆಯನ್ನು ಮಾಡಿಸಲು ಸಾಧ್ಯವಾಗಿಲ್ಲ.
ಸರಕಾರ ವರ್ಷದಿಂದ ವರ್ಷಕ್ಕೆ ಬಡವರ ಉದ್ದಾರಕ್ಕೆಂದು ಅನುದಾನವನ್ನು ನೀಡುತ್ತಿದೆ. ಈ ಅನುದಾನ ಗ್ರಾಪಂ ಮೂಲಕ ವಿತರಣೆಯಾಗುತ್ತದೆ. ಸೀತಮ್ಮ ಕುಟುಂಬಕ್ಕೆ ಮನೆ ನೀಡಲು ಗ್ರಾಪಂಗೆ ಮನಸ್ಸಿದ್ದರೂ ಯಾವುದೇ ದಾಖಲೆ ಇಲ್ಲದ ಕಾರಣ ಮನೆ ನೀಡಲು ಕಾನೂನಿನ ತೊಡಕಾಗಿದೆ. ಸೀತಮ್ಮ ಕುಟುಂಬದ ಸಂಕಷ್ಟವನ್ನು ಕಂಡು ಅನೇಕ ಮಂದಿ ಸಹಾಯ ಮಾಡಿದ್ದಾರೆ, ಮಾಡುತ್ತಲೇ ಇದ್ದಾರೆ. ಆದರೆ ಇವೆಲ್ಲ ಎಚ್ಟು ದಿನ ಎಂಬುದೇ ಈಗ ಕಾಡುತ್ತಿರುವ ಪ್ರಶ್ನೆ. ಸಂಬಂಧಿಸಿದ ಇಲಾಖೆ ಇವರಿಗೊಂದು ನಿವೇಶನ ಮಂಜೂರು ಮಾಡುವ ಮೂಲಕ ಇವರಿಗೊಂದು ಸೂರು ಕಲ್ಪಿಸಬೇಕಿದೆ, ಜೊತೆಗೆ ಸಂಘಟನೆಗಳ ಸಹಾಯ ಹಸ್ತವೂ ಬೇಕಾಗಿದೆ.