ದೆಹಲಿ ಸರ್ಕಾರವನ್ನು ಅಸ್ಥಿರಗೊಳಿಸಿ ರಾಷ್ಟ್ರಪತಿ ಆಡಳಿತ ಹೇರಲು ಬಿಜೆಪಿ ಸಂಚು: ಆಪ್ ಆರೋಪ
ದೆಹಲಿಯಲ್ಲಿ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಸರ್ಕಾರವನ್ನು ಬೀಳಿಸಿ, ರಾಷ್ಟ್ರಪತಿ ಆಡಳಿತ ಹೇರುವ ಮೂಲಕ ಹಿಂಬಾಗಿಲಿನಿಂದ ಸರ್ಕಾರ ನಡೆಸಲು ಬಿಜೆಪಿ ಪಿತೂರಿ ನಡೆಸುತ್ತಿದೆ ಎಂದು ಎಎಪಿಯ ಹಿರಿಯ ನಾಯಕಿ ಮತ್ತು ಸಚಿವೆ ಅತಿಶಿ ಆರೋಪಿಸಿದ್ದಾರೆ.
ದೆಹಲಿಯು ಸಾಂವಿಧಾನಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಸೂಚನೆ ನೀಡಿ ಎಂದು ಪ್ರತಿಪಕ್ಷ ಬಿಜೆಪಿ, ರಾಷ್ಟ್ರಪತಿಗಳಿಗೆ ಪತ್ರ ಬರೆದಿದೆ. ಈ ಹಿನ್ನೆಲೆಯಲ್ಲಿ ಎಎಪಿ ನಾಯಕರು ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಕೇಜ್ರಿವಾಲ್ ಸರ್ಕಾರ ಉರುಳಿದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಶೂನ್ಯ ಸ್ಥಾನ ನೀಡುವ ಮೂಲಕ ದೆಹಲಿಗರು ತಕ್ಕ ಉತ್ತರ ನೀಡಲಿದ್ದಾರೆ ಮತ್ತು ಆಮ್ ಆದ್ಮಿ ಪಕ್ಷ(ಎಎಪಿ) ಎಲ್ಲಾ 70 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅವರು ಹೇಳಿದ್ದಾರೆ.