ಅತ್ಯಾಚಾರ ವಿರೋಧಿ ಕಾನೂನನ್ನು ಕಠಿಣಗೊಳಿಸುವಂತೆ ಆಗ್ರಹಿಸಿ ಪ್ರಧಾನಿಗೆ ಪತ್ರ ಬರೆದ ಮಮತಾ ಬ್ಯಾನರ್ಜಿ
ಕೊಲ್ಕತ್ತಾ: ಪಶ್ಚಿಮ ಬಂಗಾಳದ ಕೊಲ್ಕತ್ತಾ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಾಚಾರ ಪ್ರಕರಣಗಳನ್ನು ಎದುರಿಸಲು ಕಠಿಣ ಕಾನೂನು ರೂಪಿಸುವಂತೆ ಆಗ್ರಹಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಕೊಲ್ಕತ್ತಾದ ಸರ್ಕಾರಿ ಸ್ವಾಮ್ಯದ ಆರ್ಜಿ ಕರ್ ಆಸ್ಪತ್ರೆಯಲ್ಲಿ 31 ವರ್ಷದ ಸ್ನಾತಕೋತ್ತರ ವೈದ್ಯೆಯ ಮೇಲೆ ನಡೆದ ಭೀಕರ ಅತ್ಯಾಚಾರ ಮತ್ತು ಹತ್ಯೆಯ ಕುರಿತು ರಾಷ್ಟ್ರವ್ಯಾಪಿ ಆಕ್ರೋಶದ ಬೆನ್ನಲ್ಲೇ ಈ ಆಗ್ರಹ ಮಾಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿಗೆ ಬರೆದ ಪತ್ರದಲ್ಲಿ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ “ದೇಶದಾದ್ಯಂತ ನಿಯಮಿತವಾಗಿ ಮತ್ತು ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ನಿಮ್ಮ ಗಮನಕ್ಕೆ ತರಲು ನಾನು ಬಯಸುತ್ತೇನೆ. ಅನೇಕ ಸಂದರ್ಭಗಳಲ್ಲಿ ಕೊಲೆಯೊಂದಿಗೆ ಅತ್ಯಾಚಾರಗಳು ನಡೆಯುತ್ತಿವೆ. ಲಭ್ಯವಿರುವ ಮಾಹಿತಿಯ ಪ್ರಕಾರ, ದೇಶಾದ್ಯಂತ ಪ್ರತಿದಿನ ಸುಮಾರು 90 ಅತ್ಯಾಚಾರ ಪ್ರಕರಣಗಳು ನಡೆಯುತ್ತಿರುವುದು ಸಮಾಜ ಮತ್ತು ರಾಷ್ಟ್ರದ ಆತ್ಮಸಾಕ್ಷಿಯನ್ನು ಅಲುಗಾಡಿಸುತ್ತಿದೆ. ಅಂತಹ ಘೋರ ಅಪರಾಧಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ವಿರುದ್ಧ ಕಠಿಣ ಶಿಕ್ಷೆಯನ್ನು ಸೂಚಿಸುವ ಕಟ್ಟುನಿಟ್ಟಾದ ಕಾನೂನಿನ ಮೂಲಕ ಇಂತಹ ಗಂಭೀರ ಮತ್ತು ಸೂಕ್ಷ್ಮ ಸಮಸ್ಯೆಯನ್ನು ಸಮಗ್ರ ರೀತಿಯಲ್ಲಿ ಕೇಂದ್ರ ಸರ್ಕಾರ ಪರಿಹರಿಸಬೇಕಾಗಿದೆ. ಅಂತಹ ಪ್ರಕರಣಗಳಲ್ಲಿ ತ್ವರಿತ ವಿಚಾರಣೆಗಾಗಿ ತ್ವರಿತಗತಿಯ ವಿಶೇಷ ನ್ಯಾಯಾಲಯಗಳ ಸ್ಥಾಪನೆಯನ್ನು ಪ್ರಸ್ತಾವಿತ ಶಾಸನದಲ್ಲಿ ಪರಿಗಣಿಸಬೇಕು. ತ್ವರಿತ ನ್ಯಾಯವನ್ನು ಒದಗಿಸಲು ಅಂತಹ ಪ್ರಕರಣಗಳ ವಿಚಾರಣೆಯನ್ನು 15 ದಿನಗಳಲ್ಲಿ ಪೂರ್ಣಗೊಳಿಸಬೇಕು ಎಂದು ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದಾರೆ.