‘ಶೂನ್ಯ’ದಲ್ಲೂ ಬೈರ್ಸ್ಟೋವ್ ದಾಖಲೆ
ಭಾರತದ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗುವುದರೊಂದಿಗೆ ಇಂಗ್ಲೆಂಡ್ ತಂಡದ ಆಟಗಾರ ಜಾನಿ ಬೈರ್ಸ್ಟೋವ್ ಕೆಟ್ಟ ದಾಖಲೆಯೊಂದನ್ನು ಬರೆದಿದ್ದಾರೆ.
ರಾಜ್ಕೋಟ್ ನಿರಂಜನ್ ಶಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಜಾನಿ ಬೈರ್ಸ್ಟೋವ್ ಶೂನ್ಯಕ್ಕೆ ಔಟಾಗಿದ್ದಾರೆ. ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬೈರ್ಸ್ಟೋವ್ (0) ಕುಲ್ದೀಪ್ ಯಾದವ್ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ನಿರ್ಗಮಿಸಿದ್ದರು.
ಭಾರತದ ವಿರುದ್ಧ ಇದುವರೆಗೆ 37 ಟೆಸ್ಟ್ ಇನಿಂಗ್ಸ್ ಆಡಿರುವ ಬೈರ್ಸ್ಟೋವ್ ಒಟ್ಟು 8 ಬಾರಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ.
ಭಾರತದ ವಿರುದ್ಧ 15 ಟೆಸ್ಟ್ ಇನಿಂಗ್ಸ್ ಆಡಿರುವ ಪಾಕಿಸ್ತಾನ ತಂಡದ ಆಟಗಾರ ದಾನಿಶ್ ಕನೇರಿಯಾ 7 ಬಾರಿ ಶೂನ್ಯಕ್ಕೆ ಔಟಾಗಿದ್ದರು. ಈ ಮೂಲಕ ಟೀಮ್ ಇಂಡಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ಹೆಚ್ಚು ಬಾರಿ ಸೊನ್ನೆ ಸುತ್ತಿದ ಬ್ಯಾಟರ್ ಎನಿಸಿಕೊಂಡಿದ್ದರು. ಆ ಕೆಟ್ಟ ದಾಖಲೆ ಇದೀಗ ಬೈರ್ಸ್ಟೋವ್ ಹೆಸರಿಗೆ ಸೇರ್ಪಡೆಯಾಗಿದೆ.