ಕಂಟೈನರ್ ಬಿದ್ದು ಅಪ್ಪಚ್ಚಿಯಾದ ಕಾರು
ಕಂಟೈನರ್ ಲಾರಿಯೊಂದು ಕಾರಿನ ಮೇಲೆ ಬಿದ್ದು ಕಾರು ಅಪ್ಪಚ್ಚಿಯಾದಯಾದ ಘಟನೆ ಆ.10ರಂದು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಬರ್ಚಿನಹಳ್ಳದಲ್ಲಿ ನಡೆದಿದೆ. ದಾವಣಗೆರೆ ಮೂಲದವರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಕಂಟೈನರ್ ಲಾರಿ ಬಿದ್ದಿದ್ದು, ಕಾರು ಸಂಪೂರ್ಣ ಅಪ್ಪಚ್ಚಿಯಾಗಿದೆ. ಆದರೆ ಈ ಹೊತ್ತಿನಲ್ಲಿ ಕಾರಿನಲ್ಲಿ ಯಾರೂ ಇರದ ಪರಿಣಾಮ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರಿಗೆ ವಾಂತಿ ಬಂದ ಕಾರಣ ಎಲ್ಲರೂ ಕಾರಿನಿಂದ ಕೆಳಗಿಳಿದ ವೇಳೆ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.
ದಾವಣಗೆರೆಯ ನಿವಾಸಿಗಳಾದ ನಾಲ್ಕು ಮಂದಿ ಮತ್ತು ಕಾರು ಡ್ರೈವರ್ ಧರ್ಮಸ್ಥಳ ಕ್ಷೇತ್ರಕ್ಕೆ ಬಂದವರು ಬಳಿಕ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಸಂದರ್ಶನ ಮಾಡಿ ಊರಿಗೆ ಹಿಂದಿರುಗುವ ವೇಳೆ ಬರ್ಚಿನಹಳ್ಳದಲ್ಲಿ ಅಪಘಾತ ಸಂಭವಿಸಿದೆ.
ಕಾರಿನಲ್ಲಿದ್ದ ಒಬ್ಬರಿಗೆ ವಾಂತಿ ಬಂದ ಕಾರಣ ಹೆದ್ದಾರಿ ಬದಿಯಲ್ಲಿ ಕಾರನ್ನು ನಿಲ್ಲಿಸಿ ಉಪಚರಿಸಲು ಎಲ್ಲರೂ ಇಳಿದಿದ್ದರು. ಚಾಲಕ ಮೂತ್ರ ವಿಸರ್ಜನೆಗೆ ಹೋಗಿದ್ದರು. ಈ ವೇಳೆ ಎಲ್ಲರ ಕಣ್ಣೆದುರೇ ಅವರ ಕಾರಿನ ಮೇಲೆ ಕಂಟೈನರ್ ಲಾರಿ ಮಗುಚಿ ಬಿದ್ದು ಕಾರು ಅಪ್ಪಚ್ಚಿಯಾಗಿದೆ ಎಂದು ತಿಳಿದು ಬಂದಿದೆ.