ಸದನದಲ್ಲಿ ತುಳುವಿಗಾಗಿ ಹೋರಾಟ: ತುಳು ಅಕಾಡೆಮಿಯಿಂದ ಶಾಸಕರಿಗೆ ಸನ್ಮಾನ
ಪುತ್ತೂರು: ವಿಧಾನಸಭಾ ಅಧಿವೇಶನದಲ್ಲಿ ತುಳುವಿನಲ್ಲೇ ಮಾತನಾಡುವ ಮೂಲಕ ತಾನು ಶಾಸಕನಾಗಿ ಆಯ್ಕೆಯಾದ ಮೊದಲ ಅಧಿವೇಶನದಲ್ಲೂ ತುಳು ಬಗ್ಗೆ ಸದನಕ್ಕೆ ಪರಿಚಯಿಸುವ ಮೂಲಕ ತುಳುವಿಗಾಗಿ ನಿರಂತರ ಹೋರಾಟ ಮಾಡುತ್ತಿರುವ ಪುತ್ತೂರು ಶಾಸಕ ಅಶೋಕ್ ರೈ ಅವರಿಗೆ ಕರ್ನಾಟಕ ರಾಜ್ಯ ತುಳು ಅಕಾಡೆಮಿಯಿಂದ ಗೌರವ ಕಾರ್ಯಕ್ರಮ ಶಾಸಕರ ಕಚೇರಿಯಲ್ಲಿ ನಡೆಯಿತು.
ಕರ್ನಾಟಕ ತುಳು ಅಕಾಡೆಮಿ ಅಧ್ಯಕ್ಷರಾದ ತಾರನಾಥ ಗಟ್ಟಿ ಕಾಪಿಕ್ಕಾಡ್ ರವರು ಶಾಸಕರನ್ನು ಸನ್ಮಾನಿಸಿದರು. ಬಳಿಕ ಮಾತನಾಡಿದ ಅವರು ಶಾಸಕರಾದ ಬಳಿಕ ಪ್ರತೀ ಬಾರಿ ಸದನದಲ್ಲಿ ತುಳು ಭಾಷೆಯಲ್ಲಿ ಮಾತನಾಡಿ, ತುಳುವನ್ನು ವಿಶ್ವಕ್ಕೆ ಪರಿಚಯಿಸುವ ಕೆಲಸವನ್ನು ಮಾಡಿದ್ದಾರೆ. ತುಳು ರಾಜ್ಯದ ಎರಡನೇ ಹೆಚ್ಚುವರಿ ಭಾಷೆಯಾಗಿ ಘೋಷಣೆ ಮಾಡಬೇಕೆಂದು ಕಳೆದ ವಿಧಾನ ಸಭೆಯಲ್ಲಿಆಗ್ರಹವನ್ನೂ ಮಾಡಿದ್ದಾರೆ. ತುಳು ನಾಡಿನ ಇತಿಹಾಸದಲ್ಲೇ ಓರ್ವ ಶಾಸಕ ಈ ಪರಿಯಾಗಿ ತುಳುವಿಗೆ ಹೋರಾಟ ಮಾಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಹೇಳಿದರು.