ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಜಡೇಜಾ
ಟೀಂ ಇಂಡಿಯಾ ಟಿ20 ವಿಶ್ವ ಚಾಂಪಿಯನ್ ಆಗಿರುವ ಸಂಭ್ರಮದ ಬೆನ್ನಲ್ಲೇ ಅಭಿಮಾನಿಗಳಿಗೆ ನಿರಾಶೆಯೂ ಕಾಡತಡಗಿದೆ. ತಂಡದ ಅನುಭವಿ ಆಟಗಾರರ ವಿದಾಯದ ಪರ್ವ ಒಂದರ ಹಿಂದೆ ಒಂದರಂತೆ ಮುಂದುವರಿದಿದೆ. ತಂಡದ ಮಾಜಿ ನಾಯಕ ಹಾಗೂ ರನ್ ಮೆಶಿನ್ ಖ್ಯಾತಿಯ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಸ್ವಲ್ಪ ಸಮಯದ ನಂತರ ತಂಡದ ನಾಯಕ ರೋಹಿತ್ ಶರ್ಮಾ ಕೂಡ ಟಿ20 ಕ್ರಿಕೆಟ್ ಗೆ ವಿದಾಯ ಹೇಳಿದ್ದರು. ಇದೀಗ ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಕೂಡ ಇದೇ ಮಾದರಿಯಲ್ಲಿ ನಿವೃತ್ತಿ ಘೋಷಿಸಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಟಿ20 ವಿಶ್ವಕಪ್ ಟ್ರೋಫಿಯೊಂದಿಗಿರುವ ಫೋಟೋವನ್ನು ಶೇರ್ ಮಾಡುವ ಮೂಲಕ ಜಡೇಜಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಭಾವನಾತ್ಮಕ ಸಂದೇಶ ಬರೆದಿರುವ ರವೀಂದ್ರ ಜಡೇಜಾ, ನಾನು ಹೃದಯ ತುಂಬಿದ ಸಂತೋಷದಿಂದ ಅಂತಾರಾಷ್ಟ್ರೀಯ ಟಿ20 ಮಾದರಿಗೆ ವಿದಾಯ ಹೇಳುತ್ತಿದ್ದೇನೆ. ಓಡುವ ಕುದುರೆಯಂತೆ ನಾನು ಯಾವಾಗಲೂ ನನ್ನ ದೇಶಕ್ಕಾಗಿ ನನ್ನ ಅತ್ಯುತ್ತಮವಾದುದನ್ನು ನೀಡಲು ಪ್ರಯತ್ನಿಸಿದ್ದೇನೆ. ಇದೀಗ ಇತರ ಸ್ವರೂಪಗಳಲ್ಲಿಯೂ ಅದೇ ರೀತಿಯ ಪ್ರದರ್ಶನವನ್ನು ಮುಂದುವರಿಸಲು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ. ಟಿ20 ವಿಶ್ವಕಪ್ ಟ್ರೋಫಿಯನ್ನು ಗೆಲ್ಲುವ ಕನಸು ನನಸಾಗಿದೆ ಮತ್ತು ಇದು ನನ್ನ ಟಿ20 ಅಂತರರಾಷ್ಟ್ರೀಯ ವೃತ್ತಿಜೀವನದ ಅತಿದೊಡ್ಡ ಕ್ಷಣವಾಗಿದೆ. ಈ ನೆನಪುಗಳಿಗಾಗಿ ಮತ್ತು ನಿಮ್ಮ ನಿರಂತರ ಪ್ರೋತ್ಸಾಹಕ್ಕಾಗಿ ಎಲ್ಲರಿಗೂ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.