ಇಸ್ರೇಲ್‌ನಿಂದ ತನ್ನ ರಾಯಭಾರಿಯನ್ನು ಹಿಂದಕ್ಕೆ ಕರೆಸಿಕೊಂಡ ಬ್ರೆಝಿಲ್

ರಫಾದಲ್ಲಿ ನಿರಾಶ್ರಿತ ಶಿಬಿರಗಳ ಮೇಲೆ ಇಸ್ರೇಲ್ ಸೇನಾ ದಾಳಿಯಲ್ಲಿ ಹಲವಾರು ಮಂದಿ ಪ್ಯಾಲೆಸ್ತೀನ್ ಜನರು ಮೃತಪಟ್ಟ ಘಟನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಬ್ರೆಝಿಲ್ ಇದೀಗ ಇಸ್ರೇಲ್‌ನಿಂದ ತನ್ನ ರಾಯಭಾರಿಯನ್ನು ಹಿಂದಕ್ಕೆ ಕರೆಸಿಕೊಂಡಿದೆ.
ಗಾಝಾದಲ್ಲಿ ಇಸ್ರೇಲ್ ಜನಾಂಗೀಯ ಹತ್ಯಾಕಾಂಡದಲ್ಲಿ ತೊಡಗಿದೆಯೆಂದು ಬ್ರೆಝಿಲ್ ಅಧ್ಯಕ್ಷ ಲೂಯಿಸ್ ಲುಲಾ ದ ಸಿಲ್ವಾ ಆಪಾದಿಸಿದ್ದರು. ಇದಕ್ಕೆ ಇಸ್ರೇಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.
ಬ್ರೆಝಿಲ್ ರಾಯಭಾರಿ ಪ್ರೆಡ್ರಿಕೊ ಮೆಯೆರ್ ಅವರನ್ನು ಜೆರುಸಲೇಂನಲ್ಲಿರುವ ಯಾದ್ ವಾಶೆಮ್ ಹೊಲೊಕಾಸ್ಟ್ ಸ್ಮಾರಕ ಕೇಂದ್ರಕ್ಕೆ ಕರೆಸಿಕೊಂಡು, ಬ್ರೆಝಿಲ್ ಅಧ್ಯಕ್ಷರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿತ್ತು. ಬಳಿಕ ಬ್ರೆಝಿಲ್ ತನ್ನ ರಾಯಭಾರಿಯನ್ನು ಅಪಮಾನಿಸಲಾಗಿದೆಯೆಂದು ಆಕ್ರೋಶ ವ್ಯಕ್ತಪಡಿಸಿತ್ತು. ಅಲ್ಲದೆ ತನ್ನ ದೇಶದಲ್ಲಿನ ಇಸ್ರೇಲ್ ರಾಯಭಾರಿಗೆ ಸಮನ್ಸ್ ನೀಡಿತ್ತು. ಬಳಿಕ ರಾಯಭಾರಿ ಫ್ರೆಡ್ರಿಕೊ ಮೆಯೆರ್ ಅವರನ್ನು ಹಿಂದಕ್ಕೆ ಕರೆಸಿಕೊಂಡಿದೆ.