ಮಳೆಯ ಆರ್ಭಟಕ್ಕೆ ದುಬೈ ತತ್ತರ
ದುಬೈಯಲ್ಲಿ ಭಾರೀ ಮಳೆಯಾಗಿದ್ದು, ರಸ್ತೆಗಳಲ್ಲಿ ನದಿಯಂತೆ ನೀರು ಹರಿಯುತ್ತಿದೆ. ಕಾರು, ಬಸ್ ಗಳು ಸೇರಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ನಗರದಲ್ಲಿ ಪ್ರವಾಹದಿಂದಾಗಿ ಪ್ರಮುಖ ಹೆದ್ದಾರಿಗಳು ಮುಳುಗಿವೆ ಮತ್ತು ರಸ್ತೆಗಳು ಮತ್ತು ಸೇತುವೆಗಳನ್ನು ಮುಚ್ಚಲಾಗಿದೆ. ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾದ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೂಡಾ ಪ್ರವಾಹ ಪರಿಸ್ಥಿತಿ ಉಂಟಾಗಿದೆ ಎನ್ನಲಾಗಿದೆ.
ಮುಂಬರುವ ಚಂಡಮಾರುತ ಭೀತಿಯಿಂದಾಗಿ ಯುಎಇಯಾದ್ಯಂತ ಶಾಲೆಗಳನ್ನು ಮುಚ್ಚಲಾಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಉಂಟಾಗಲಿರುವ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳ ಬಗ್ಗೆ ನಿವಾಸಿಗಳಿಗೆ ಎಚ್ಚರಿಕೆ ನೀಡಿ ಪೊಲೀಸರು ಮುಂಚಿತವಾಗಿ ಸಲಹೆ ನೀಡಿದ್ದರು.
ದೇಶದಲ್ಲಿನ ಅಸಾಮಾನ್ಯ ಹವಾಮಾನದಿಂದಾಗಿ ಶಾಪಿಂಗ್ ಕೇಂದ್ರಗಳು ಮತ್ತು ಮಾಲ್ ಗಳು ಸಹ ತೊಂದರೆ ಅನುಭವಿಸಿದವು. ಭಾರೀ ಮಳೆಯಿಂದಾಗಿ ಉಂಟಾದ ಹಾನಿಯನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.