ಮಂಗಳೂರು: ಸಭಾಂಗಣ ವರಾಂಡದ ಆವರಣ ಗೋಡೆ ಕುಸಿದು ನಾಲ್ವರು ವಿದ್ಯಾರ್ಥಿಗಳಿಗೆ ಗಾಯ, ಓರ್ವ ಗಂಭೀರ
ಮಂಗಳೂರು: ಎಮ್ಮೆಕೆರೆ ರಮಾಲಕ್ಷ್ಮೀ ನಾರಾಯಣ ಕನ್ವೆನ್ಷನ್ ಸಭಾಂಗಣದಲ್ಲಿ ಸೆ.26ರಂದು ಸರ್ವ ಕಾಲೇಜು ವಿದ್ಯಾರ್ಥಿಗಳ ಪದಗ್ರಹಣ ಕಾರ್ಯಕ್ರಮದ ವೇಳೆ ಮೇಲಿನ ಮಹಡಿಯ ಸಭಾಂಗಣದ ವರಾಡದ ಆವರಣ ಗೋಡೆ ಕುಸಿದು ಬಿದ್ದ ಪರಿಣಾಮ ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ನಡೆದಿದೆ.

ಹಳೆಯಂಗಡಿ ನಿವಾಸಿ ಮಹಮ್ಮದ್ ಶಮಾತ್ (16), ಸೂರಿಂಜೆ ನಿವಾಸಿ ಮುಹಮ್ಮದ್ ಶನಾನ್ ಆಹ್ಮದ್ (18), ಅಡ್ಯಾರ್ ನಿವಾಸಿ ಹನೀಫ್ (23), ಕಾವೂರು ಗಾಂಧಿನಗರ ನಿವಾಸಿ ದಾವೂದ್ ಫರ್ಸಿನ್ ಅಹ್ಮದ್ (18), ಕಸಬ ಬೆಂಗ್ರೆಯ ಮಹಮ್ಮದ್ ಶಾಕೀಲ್ ಹುಸೈನ್ ಗಾಯಗೊಂಡವರು.
ಶನಿವಾರ ಮಧ್ಯಾಹ್ನ ವೇಳೆ ಚುನಾವಣೆ ನಡೆದು ವಿಜೇತರ ಘೋಷಣೆಯಾಗಿ ಪದಗ್ರಹಣ ನಡೆಯುತ್ತಿದ್ದ ವೇಳೆ ಸಭಾಂಗಣದ ಒಂದನೇ ಮಹಡಿಯ ಪ್ಯಾಸೇಜ್ನ ತಡೆಗೋಡೆಗೆ ಹಲವು ವಿದ್ಯಾರ್ಥಿಗಳು ಒರಗಿದ್ದರು. ಈ ಸಂದರ್ಭ ಏಕಾಏಕಿ ತಡೆಗೋಡೆ ಕುಸಿದು ಕೆಳಕ್ಕೆ ಬಿದ್ದಿದ್ದು, ಇದರಿಂದ ಮೂವರು ವಿದ್ಯಾರ್ಥಿಗಳು ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಇದೇ ವೇಳೆ ಕೆಳಗೆ ನಿಂತಿದ್ದ ವಿದ್ಯಾರ್ಥಿ ಸೇರಿದಂತೆ ಒಟ್ಟು 4 ಮಂದಿಗೆ ಗಾಯವಾಗಿದೆ. ಅವರನ್ನು ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.
ಈ ಪೈಕಿ ಮುಹಮ್ಮದ್ ಶಮಾಝ್ ತಲೆಗೆ ಗಂಭೀರ ಗಾಯವಾಗಿದ್ದು, ಆತನ ಮಿದುಳು ನಿಷ್ಕ್ರಿಯಗೊಂಡಿದೆ ಎಂದು ತಿಳಿದು ಬಂದಿದೆ.
ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಭಾಭವನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸೇರಿದ್ದರು ಎನ್ನಲಾಗಿದೆ.



