ವೃದ್ದೆಯ ಮನೆಯಲ್ಲಿದ್ದ ಚಿನ್ನ ಏಕಾಏಕಿ ಮಾಯ..!
ಪೊಲೀಸರಿಗೆ ಕರೆ ಮಾಡಿದಾಗ ತಲೆದಿಂಬಿನಡಿಯಲ್ಲಿ ಪತ್ತೆ
ಪುತ್ತೂರು: ಮನೆಯಲ್ಲಿಟ್ಟಿದ್ದ ಚಿನ್ನ ನಾಪತ್ತೆಯಾಗಿ ನಂತರ ಪತ್ತೆಯಾದ ಘಟನೆ ದರ್ಬೆಯಲ್ಲಿ ನಡೆದಿದೆ. ವೃದ್ದೆಯರಿಬ್ಬರೇ ವಾಸ ಮಾಡುತ್ತಿದ್ದ ಮನೆಯಲ್ಲಿದ್ದ ಚಿನ್ನಾಭರಣ ನಾಪತ್ತೆಯಾಗಿದ್ದು ಹುಡುಕಾಡಿದರೂ ಪತ್ತೆಯಾಗಿರಲಿಲ್ಲ, ಕೊನೆಗೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದಾಗ ಪೊಲೀಸರು ಬರುವುದರೊಳಗೆ ಬೆಡ್‌ನ ತಲೆದಿಂಬಿನಡಿಯಲ್ಲಿ ಪತ್ತೆಯಾದ ಘಟನೆ ನಗರದ ದರ್ಬೆಯಲ್ಲಿ ವರದಿಯಾಗಿದೆ.

ದರ್ಬೆ ಬಳಿಯ ಮನೆಯೊಂದರಲ್ಲಿ ನಿವೃತ್ತ ವೃದ್ದ ಶಿಕ್ಷಕಿಯರಿಬ್ಬರು ವಾಸ ಮಾಡುತ್ತಿದ್ದಾರೆ. ಇವರಿಬ್ಬರು ಮಾತ್ರ ಮನೆಯಲ್ಲಿದ್ದು ಮನೆಯಲ್ಲಿ ಬೇರೆ ಯಾರೂ ಇಲ್ಲ. ಕಳೆದ ಎರಡು ದಿನಗಳ ಹಿಂದೆ ಇವರು ಕಪಾಟಿನಲ್ಲಿಟ್ಟಿದ್ದ ಚಿನ್ನದ ಸರವೊಂದು ಕಣ್ಮರೆಯಾಗಿತ್ತು. ಇಬ್ಬರು ವೃದ್ದೆ ಮತ್ತು ಕೆಲಸದಾಳು ಸೇರಿ ಮನೆಯಲ್ಲೆಲ್ಲಾ ಇಡೀ ದಿನ ಹುಡುಕಾಡಿದ್ದಾರೂ ಚಿನ್ನದ ಸರ ಪತ್ತೆಯಾಗಲಿಲ್ಲ.
ಮಾರನೇ ದಿನವೂ ಇಡೀ ಮನೆಯನ್ನೇ ಗುಡಿಸಿ ಹುಡುಕಿದ್ದಾರೆ ಆದರೂ ಪತ್ತೆಯಾಗಲಿಲ್ಲ. ಕೊನೆಗೆ ವೃದ್ದೆಯರಿಬ್ಬರು ಸಮಾಜ ಸೇವಕರೋರ್ವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅವರು ಮನೆಗೆ ಬಂದು ಹುಡುಕಾಟ ನಡೆಸಿದ್ದಾರೆ ಆದರೂ ಚಿನ್ನ ಸಿಗಲಿಲ್ಲ. ಕೊನೆಗೆ ಪೊಲಿಸರಿಗೆ ಕರೆ ಮಾಡಿ ವಿಷಯ ತಿಳಿಸಸಿದ್ದು ಪೊಲೀಸರು ಬರುವಿಕೆಯನ್ನು ಕಾಯುತ್ತಾ ಮನೆಯ ಹೊರಗೆ ವೃದ್ದೆಯರಿಬ್ಬರು ಕೂತಿದ್ದರು. ಆ ವೇಳೆ ಮನೆಯೊಳಗಿದ್ದ ಕೆಲಸದಾಳು ಚಿನ್ನ ಸಿಕ್ಕಿದೆ ಬೆಡ್‌ರೂಂನ ತಲೆದಿಂಬಿನಡಿಯಲ್ಲಿ ಇತ್ತು ಎಂದು ವೃದ್ದೆಯ ಕೈಗೆ ಕೊಟ್ಟಿದ್ದಾರೆ. ಅಷ್ಟು ಹುಡುಕಾಡಿದರೂ ಸಿಗದ ಚಿನ್ನ ಏಕಾಏಕಿ ತಲೆದಿಂಬಿನಡಿಯಲ್ಲಿ ಹೇಗೆ ಬಂತು ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಪೊಲೀಸರು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.