ಕುಮ್ಕಿ ಭೂಮಿಯನ್ನು ಅಕ್ರಮ ಸಕ್ರಮದಲ್ಲಿ ಮಂಜೂರಾತಿಗೆ ಅವಕಾಶ ನೀಡಿ: ಅಧಿವೇಶನದಲ್ಲಿ ಸರಕಾರಕ್ಕೆ ಮನವಿ ಮಾಡಿದ ಶಾಸಕ ಅಶೋಕ್ ರೈ
ಪುತ್ತೂರು: ದ ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಪಟ್ಟಾ ಕೃಷಿ ಭೂಮಿಗೆ ಹೊಂದಿಕೊಂಡು ಸುಮಾರು 90 ಮೀಟರ್ ಅಥವಾ ನಾಲ್ಕೂವರೆ ಸಂಕೋಲೆ ಜಾಗವನ್ನು ಕುಮ್ಕಿ ಎಂಬ ಕಾರಣಕ್ಕೆ ರೈತರಿಗೆ ಅಕ್ರಮ ಸಕ್ರಮದಲ್ಲಿ ಮಂಜೂರು ಮಾಡಲು ಸಾಧ್ಯವಾಗುತ್ತಿಲ್ಲ, ಈ ಜಾಗವನ್ನು ಅಕ್ರಮ ಸಕ್ರಮದಡಿ ಮಂಜೂರಾತಿ ಮಾಡಲು ಅವಕಾಶ ನೀಡುವಂತೆ ಅಧಿವೇಶನದಲ್ಲಿ ಶಾಸಕರಾದ ಅಶೋಕ್ ರೈ ಸರಕಾರವನ್ನು ಆಗ್ರಹಿಸಿದ್ದಾರೆ.
ಅಧಿವೇಶನದಲ್ಲಿ ಮಾತನಾಡಿದ ಅವರು ದ ಕ ಹಾಗೂ ಉಡುಪಿ ಜಿಲ್ಲೆಯ ಕೃಷಿಕರು ತಮ್ಮ ಪಟ್ಟಾ ಜಾಗಕ್ಕೆ ಹೊಂದಿಕೊಂಡಿರುವ ಈ ಜಾಗದಲ್ಲಿ ಹಲವಾರು ವರ್ಷದಿಂದ ಕೃಷಿ ಮಾಡಿಕೊಂಡು ಬಂದಿದ್ದಾರೆ. ಈಗಾಗಲೇ ಈ ಜಾಗದಲ್ಲಿ ಕೃಷಿಯೂ ಇದೆ. ಈ ಜಾಗವನ್ನು ಅಕ್ರಮ ಸಕ್ರಮದಡಿ ಮಂಜೂರಾತಿ ಮಾಡಲು ಕಂದಾಯ ಇಲಾಖೆ ಒಪ್ಪುತ್ತಿಲ್ಲ. ವರ್ಗ ಜಾಗಕ್ಕೆ ತಾಗಿಕೊಂಡಿರುವ ಈ ಜಾಗವನ್ನು ಕುಮ್ಕಿ ಎಂದು ನಮೂದಾಗಿರುವ ಕಾರಣಕ್ಕೆ ಕೃಷಿಕರಿಗೆ ನೀಡಲು ಸಾಧ್ಯವಾಗುತ್ತಿಲ್ಲ. ದಾಖಲೆಯಲ್ಲಿ ಎಲ್ಲೂ ಕುಮ್ಕಿ ಎಂದೂ ನಮೂದಿಸಿಲ್ಲ. ಸರಕಾರಿ ಜಾಗವೆಂದೇ ಈ ಜಾಗದ ದಾಖಲೆ ತೋರಿಸುತ್ತದೆ ಆದರೆ ಕಂದಾಯ ಅಧಿಕಾರಿಗಳು ವರ್ಗ ಜಾಗದಿಂದ ನಾಲ್ಕೂವರೆ ಸಂಕೋಲೆ ಕುಮ್ಕಿ ಜಾಗವಾಗಿದೆ ಎಂದು ಅಕ್ರಮ ಸಕ್ರಮಕ್ಕೆ ಕೃಷಿಕರು ಅರ್ಜಿ ಹಾಕಿದ್ದರೂ ಅದನ್ನು ತಿರಸ್ಕಾರ ಮಾಡುತ್ತಿದ್ದಾರೆ. ಸರಕಾರ ಈ ಬಗ್ಗೆ ಹೊಸ ಕಾನೂನನ್ನೇ ರೂಪಿಸಿ ಕುಮ್ಕಿ ಎಂದು ಕರೆಯಲ್ಪಡುವ ಜಾಗವನ್ನು ಅಕ್ರಮ ಸಕ್ರಮದಡಿ ಮಂಜೂರು ಮಾಡಲು ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.
1998ರಲ್ಲಿ ಕುಮ್ಕಿ ಭೂಮಿಯನ್ನು ಅಕ್ರಮ ಸಕ್ರಮದಡಿ ಮಂಜೂರಾತಿಗೆ ಅವಕಾಶ ನೀಡಲಾಗಿತ್ತು. ಸರಕಾರ ಈ ಬಗ್ಗೆ ವಿಶೇಷ ಗಮನಹರಿಸಬೇಕು ಎಂದು ಸಭೆಗೆ ತಿಳಿಸಿದರು.
ಈ ಬಗ್ಗೆ ಆಳವಾದ ಅಧ್ಯಯನ ಮಾಡಬೇಕಿದೆ: ಸಚಿವ ಕೃಷ್ಣ ಬೈರೇಗೌಡ
ಶಾಸಕರಾದ ಅಶೋಕ್ ರೈಯವರು ಹೇಳಿದ ವಿಚಾರದ ಬಗ್ಗೆ ನಾನು ಅಧ್ಯಯನ ನಡೆಸಬೇಕಿದೆ. ಈ ವಿಚಾರದಲ್ಲಿ ಸುಪ್ರಿಂಕೋರ್ಟು ತೀರ್ಪು ಏನಿದೆ ಎಂಬುದನ್ನು ತಿಳಿಯಬೇಕಿದೆ. ಕುಮ್ಕಿ ಭೂಮಿಯ ಬಗ್ಗೆ ದ ಕ ಮತ್ತು ಉಡುಪಿ ಜಿಲ್ಲೆಯಲ್ಲಿ ತಕರಾರು ಇರುವ ಬಗ್ಗೆ ನಾನು ಜಿಲ್ಲೆಗೆ ಭೇಟಿ ನೀಡಿದಾಗ ಹಲವು ಮಂದಿ ಹೇಳಿದ್ದರು. ಕುಮ್ಕಿ ವಿಚಾರದಲ್ಲಿ ಆಳವಾದ ಅಧ್ಯಯನ ನಡೆಸಿ ನಾನು ಆ ಬಳಿಕ ನಿಮ್ಮ ಪ್ರಶ್ನೆಗೆ ಉತ್ತರ ನೀಡಲಿದ್ದೇನೆ. ನಿಮ್ಮ ಪ್ರಶ್ನೆ ಬಹಳ ಉತ್ತಮವಾಗಿಯೇ ಇದೆ ಅದನ್ನು ನಾನು ಪರಿಗಣಿಸಿದ್ದೇನೆ. ಶಾಸಕರು ನೀಡಿದ್ದ ಪ್ರಶ್ನೆಯಲ್ಲಿ ಕುಮ್ಕಿ ಶಬ್ದ ಇಲ್ಲದೇ ಇರುವ ಕಾರಣಕ್ಕೆ ನಾನು ಕುಮ್ಕಿ ವಿಚಾರದಲ್ಲಿ ವಿವರಣೆ ಪಡೆದುಕೊಂಡಿಲ್ಲ. ಈ ವಿಚಾರದಲ್ಲಿ ಏನು ಮಾಡಬಹುದು ಎಂಬುದನ್ನು ನಾನು ಶಾಸಕರಿಗೆ ತಿಳಿಸುತ್ತೇನೆ. ಕಾನೂನಿನ ಮೂಲಕ ಸಾಧ್ಯವಾಗುವುದಿದ್ದರೆ ಸರಕಾರದ ಜೊತೆ ಚರ್ಚೆ ನಡೆಸಿ ಸಮಸ್ಯೆಯನ್ನು ಇತ್ಯರ್ಥ ಪಡಿಸಲು ಯತ್ನ ಮಾಡುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸಭೆಗೆ ತಿಳಿಸಿದರು.