ಪಾದಾರ್ಪಣಾ ಪಂದ್ಯದಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿ ರನೌಟ್ ಗೆ ಬಲಿಯಾದ ಸರ್ಫರಾಜ್ ಖಾನ್
ಪ್ರವಾಸಿ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಯ ಪದಾರ್ಪಣೆ ಪಂದ್ಯದಲ್ಲೇ ಸರ್ಫರಾಜ್ ಖಾನ್ ಗಮನ ಸೆಳೆದಿದ್ದಾರೆ. ಆದರೆ ದುರದೃಷ್ಟವಶಾತ್ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿರುವಾಗಲೇ ರನ್ ಔಟ್ ಆಗಿ ಭಾರಿ ನಿರಾಶೆಗೆ ಗುರಿಯಾಗಿದ್ದಾರೆ.
ಅಮೋಘ ಆಟವಾಡಿದ ಸರ್ಫರಾಜ್ 66 ಎಸೆತಗಳಿಂದ 62 ರನ್ ಗಳಿಸಿದ್ದ ವೇಳೆ ರನೌಟಾಗಿದ್ದಾರೆ. ಶತಕದ ಹೊಸ್ತಿಲಿನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ರವೀಂದ್ರ ಜಡೇಜಾ ಅವರು ಆಂಡರ್ಸನ್ ಎಸೆದ ಚೆಂಡನ್ನು ಹೊಡೆದು ವಿಕೆಟ್‌ಗಳ ನಡುವೆ ಓಡುವಾಗ ಸರ್ಫರಾಜ್ ಖಾನ್ ಮುನ್ನುಗ್ಗಿ ಓಡಿದರು. ಜಡೇಜಾ ಹಿಂದೆ ಸರಿದರು. ವುಡ್ ಗುರಿಯಿಟ್ಟು ಸಿಂಗಲ್ ಸ್ಟಂಪ್‌ಗೆ ಚೆಂಡು ಹೊಡೆದಿದ್ದು ಸರ್ಫರಾಜ್ ಪೆವಿಲಿಯನ್ ಗೆ ಹಿಂತಿರುಗಲೇ ಬೇಕಾಯಿತು.
ಪೆವಿಲಿಯನ್ ನಲ್ಲಿದ್ದ ನಾಯಕ ರೋಹಿತ್ ಶರ್ಮ ಕ್ಯಾಪ್ ಕಿತ್ತೆಸೆದು ಆಕ್ರೋಶ ಹೊರ ಹಾಕಿದ್ದು ಕೆಮರಾದಲ್ಲಿ ಸೆರೆಯಾಗಿದೆ. ಸರ್ಫರಾಜ್ ಪೆವಿಲಿಯನ್ ಗೆ ಮರಳಿದ ಬೆನ್ನಲ್ಲೇ ಜಡೇಜಾ ಶತಕ ಸಿಡಿಸಿದರು. ತಮ್ಮ ಎಂದಿನ ಶೈಲಿಯ ಬ್ಯಾಟ್ ತಿರುಗಿಸುವುದು ಹೊರತಾಗಿ ಯಾವುದೇ ದೊಡ್ಡ ಆಚರಣೆ ಮಾಡಲಿಲ್ಲ. ಸರ್ಫರಾಜ್ ಕೊನೆಯ ಎಸೆತದಲ್ಲಿ ರನೌಟ್ ಆಗಿರುವುದು ಜಡೇಜಾ ಅವರ ಸಂಭ್ರಮವನ್ನು ಕಸಿದುಕೊಂಡಿತು.ಸಾಮಾಜಿಕ ತಾಣದಲ್ಲಿ ಹಲವರು ಈ ಬಗ್ಗೆ ಬರೆದುಕೊಂಡಿದ್ದು, ಸರ್ಫರಾಜ್ ಶತಕ ಸಿಡಿಸುತ್ತಿದ್ದರು. ಆದರೆ ಅದು ಜಡೇಜಾ ಮಾಡಿದ ಗೊಂದಲದಿಂದ ಸಾಧ್ಯವಾಗಲಿಲ್ಲ ಎಂದು ಹೇಳಿಕೊಂಡಿದ್ದಾರೆ.