ವಿಟ್ಲ: ಶಾಲೆಗೆ ನುಗ್ಗಿ ಸೊತ್ತುಗಳಿಗಾಗಿ ಜಾಲಾಡಿದ ಕಳ್ಳರು
ವಿಟ್ಲ: ಶತಮಾನದ ಹೊಸ್ತಿಲಲ್ಲಿರುವ ದ.ಕ.ಜಿ.ಪಂಚಾಯತ್ ಉನ್ನತೀಕರಿಸಿದ ಶಾಲೆ ಕೋಡಪದವು ಇಲ್ಲಿನ ಆಹಾರ ಸಾಮಾಗ್ರಿಗಳ ದಾಸ್ತಾನು ಕೊಠಡಿ ಮತ್ತು ಮುಖ್ಯ ಶಿಕ್ಷಕರ ಕೊಠಡಿಯ ಬೀಗ ಮುರಿದ ಕಳ್ಳರು ಸೊತ್ತುಗಳಿಗಾಗಿ ಜಾಲಾಡಿದ್ದಾರೆ.
ಕೊಠಡಿಯಲ್ಲಿ ಆಹಾರ ಸಾಮಾಗ್ರಿಗಳು ಕಂಡು ಬಂದ ಕಾರಣಕ್ಕಾಗಿ ಮತ್ತೆ ಮುಖ್ಯಶಿಕ್ಷಕರ ಕೊಠಡಿಯೊಳಗೆ ನುಗ್ಗಿದ್ದಾರೆ. ಮುಂದಿನ ತಿಂಗಳು ಉದ್ಘಾಟನೆಗೊಳ್ಳಲಿರುವ ಎರಡು ನೂತನ ಕೊಠಡಿಗಳಿಗೆ ಶಾಲಾ ಹಿತೈಷಿಗಳು, ದಾನಿಗಳು ನೀಡಿರುವ ಬೆಲೆಬಾಳುವ ವಸ್ತುಗಳು, ಟಿ.ವಿ.,ಕಂಪ್ಯೂಟರ್ ಗಳನ್ನು ಕಳವಿಗೆ ಯತ್ನಿಸಿದ್ದಾರೆ. ಆ ಸಂದರ್ಭ ಯಾವುದೋ ವಾಹನ ಅಥವಾ ಇನ್ನಿತರ ಶಬ್ದ ಕೇಳಿಸಿಕೊಂಡ ಕಳ್ಳರು ಸೊತ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಅಲ್ಲೇ ಬಿಟ್ಟು ಕಾಲ್ಕಿತ್ತಿರುವುದು ಕಂಡುಬಂದಿದೆ.
ಸೋಮವಾರ ಬೆಳಿಗ್ಗೆ ಎಂದಿನಂತೆ ಶಾಲಾ ಆರಂಭ ಸಂದರ್ಭದಲ್ಲಿ ಮುಖ್ಯಶಿಕ್ಷಕಿ ಮೋಹಲತಾ ಅವರ ಗಮನಕ್ಕೆ ಕಳವು ಯತ್ನ ತಿಳಿದು ತಕ್ಷಣ ಎಸ್.ಡಿ.ಎಂ.ಸಿ ಅಧ್ಯಕ್ಷರ ಮೂಲಕ ಪೊಲೀಸರಿಗೆ ಮಾಹಿತಿ ತಿಳಿಸಿ ನಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಶಿಕ್ಷಣ ಇಲಾಖೆಗೂ ಮಾಹಿತಿ ನೀಡಿದ್ದಾರೆ.