ಸುಳ್ಯ ಪೊಲೀಸ್ ಠಾಣೆಯಲ್ಲಿ ಸಂಭ್ರಮದ ಆಯುಧ ಪೂಜೆ
ಸುಳ್ಯ: ಒಂದಲ್ಲಾ ಒಂದು ಪ್ರಕರಣಗಳು, ದೂರುಗಳು, ಘಟನೆಗಳು ಎಂಬಿತ್ಯಾದಿ ವಿಷಯಗಳಲ್ಲಿ ಸದಾ ಓಡಾಡುತ್ತಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನವರಾತ್ರಿ ಹಬ್ಬದ ಅಂಗವಾಗಿ ಠಾಣೆಯಲ್ಲಿ ಸಡಗರದ ಆಯುಧ ಪೂಜಾ ಕಾರ್ಯಕ್ರಮವನ್ನು ಆಯೋಜಿಸಿ ಸಾರ್ವಜನಿಕರೊಂದಿಗೆ ಸಂತೋಷವಾಗಿ ಬೆರೆತ ದೃಶ್ಯ ಸುಳ್ಯ ಪೊಲೀಸ್ ಠಾಣೆಯಲ್ಲಿ ಅಕ್ಟೋಬರ್ 23ರಂದು ಸಂಜೆ ಕಂಡುಬಂದಿತು.
ಪೊಲೀಸ್ ಠಾಣೆಯಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ಚಿತ್ರ ಹಾಗೂ ಕಳಶ ಪ್ರತಿಷ್ಠಾಪನೆ ಮಾಡಿ ಪೂಜಾ ಕಾರ್ಯಕ್ರಮವನ್ನು ನಡೆಸಿ ಶ್ರೀ ದೇವಿಯ ಪ್ರಸಾದವನ್ನು ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಸುಳ್ಯ ಪರಿಸರದ ರಾಜಕೀಯ, ಸಾಮಾಜಿಕ ನೇತಾರರು, ಸಾರ್ವಜನಿಕರು ಭಾಗವಹಿಸಿ ತಮ್ಮ ಊರಿನ ರಕ್ಷಣೆಗಾಗಿ ಹಗಲು ಇರುಳು ದುಡಿಯುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಸೇರಿ ಸಂಭ್ರಮದ ಹಬ್ಬವನ್ನು ಸವಿದರು.
ಪುರೋಹಿತ ನಾಗರಾಜ್ ಭಟ್ ರವರ ನೇತೃತ್ವದಲ್ಲಿ ವಾಹನಗಳಿಗೆ ಪೂಜೆ ಹಾಗೂ ಠಾಣೆಯಲ್ಲಿ ಇರಿಸಲಾಗಿರುವ ಬಂದೂಕುಗಳಿಗೆ ಪೂಜಾ ಕಾರ್ಯಕ್ರಮ ನಡೆಯಿತು.
ಠಾಣಾ ಉಪನಿರೀಕ್ಷಕ ಈರಯ್ಯ ದೂಂತೂರು ಪೂಜಾ ವಿಧಿ ವಿಧಾನಗಳ ನೇತೃತ್ವವನ್ನು ವಹಿಸಿದ್ದರು.
ಕಿರಿಯ ಅಧಿಕಾರಿಗಳ ನೇತೃತ್ವದಲ್ಲಿ ನಡೆಯುವ ಪೂಜಾ ಕಾರ್ಯಕ್ರಮದಲ್ಲಿ ಜಿಲ್ಲೆಯ ಹಿರಿಯ ಅಧಿಕಾರಿಗಳಾದ ಮಂಗಳೂರು ಅಡಿಷನಲ್ ಎಸ್ಪಿ ಮಹದೇವಪ್ಪ,ಪುತ್ತೂರು ವಿಭಾಗದ ಡಿವೈಎಸ್ಪಿ ಡಾ.ಗಾನಾ ಪಿ ಕುಮಾರ್ ಭಾಗವಹಿಸಿ ಪ್ರಸಾದ ಸ್ವೀಕರಿಸಿ ಕಾರ್ಯಕ್ರಮಕ್ಕೆ ಮೆರುಗನ್ನು ತಂದದ್ದು ವಿಶೇಷವಾಗಿತ್ತು.
ಕಾರ್ಯಕರ್ಮದಲ್ಲಿ ಯಾವುದೇ ಜಾತಿ ಧರ್ಮದ ಭೇದಭಾವವಿಲ್ಲದೆ ಎಲ್ಲಾ ಧರ್ಮದ ಜನತೆ ಭಾಗವಹಿಸಿ ಹಬ್ಬದಲ್ಲಿ ಪಾಲ್ಗೊಂಡರು.
ಅದ್ದೂರಿಯಿಂದ ನಡೆದ ಆಯುಧ ಪೂಜಾ ಕಾರ್ಯಕ್ರಮದಲ್ಲಿ ಸುಳ್ಯ ಪೊಲೀಸ್ ಠಾಣೆಯ ಎಲ್ಲಾ ಅಧಿಕಾರಿಗಳು,ಸಿಬ್ಬಂದಿ ವರ್ಗದವರು,ಮತ್ತು ಅಧಿಕಾರಿಗಳ, ಸಿಬ್ಬಂದಿಗಳ ಕುಟುಂಬದ ಸದಸ್ಯರು ಪುಟಾಣಿ ಮಕ್ಕಳು ಭಾಗವಹಿಸಿ ಸಂಭ್ರಮಿಸಿ ತಮ್ಮ ತಮ್ಮ ಮೊಬೈಲ್ ಫೋನ್ ಗಳಲ್ಲಿ ಸೆಲ್ಫಿಗಳನ್ನು ಫೋಟೋಗಳನ್ನು ತೆಗೆಯುವ ಮೂಲಕ ಸಾರ್ವಜನಿಕರೊಂದಿಗೆ ಬೆರೆತು ಸಂಭ್ರಮಿಸಿಕೊಂಡರು.
ವಿಶೇಷವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾರ್ವಜನಿಕರಿಗೆ ಪೊಲೀಸ್ ಸಿಬ್ಬಂದಿಗಳು ತಂಪು ಪಾನೀಯಗಳನ್ನು ನೀಡುವ ಮೂಲಕ, ಭೋಜನವನ್ನು ಬಡಿಸಿ ನೀಡುವ ಮೂಲಕ ಸಾರ್ವಜನಿಕರ ಪ್ರೀತಿಗೆ ಪತ್ರರಾದರು.
ಕಾರ್ಯಕ್ರಮದಲ್ಲಿ ಮುಖಂಡರುಗಳಾದ ನಗರ ಪಂಚಾಯತ್ ಸದಸ್ಯ ಎಂ ವೆಂಕಪ್ಪ ಗೌಡ,ಸುಳ್ಯ ವಕೀಲರ ಸಂಘದ ಅಧ್ಯಕ್ಷ ಕೆ ನಾರಾಯಣ್, ಮುಖಂಡರುಗಳಾದ ಹಾಜಿ ಆದಂ ಕಮ್ಮಾಡಿ, ಮಹಮ್ಮದ್ ಕುನ್ನಿ ಗೂನಡ್ಕ, ರಂಜಿತ್ ಪೂಜಾರಿ, ಶಾಫಿ ಕುತ್ತಮಟ್ಟೆ, ಕೆ ಗೋಕುಲ್ ದಾಸ್, ರಾಜು ಪಂಡಿತ್, ಅಬ್ದುಲ್ ಲತೀಫ್ ಹರ್ಲಡ್ಕ, ಯಶ್ವಿತ್ ಕಾಳಮ್ಮನೆ, ಗಿರೀಶ್ ಕುರುಂಜಿಗುಡ್ಡೆ, ಶಶಿಕಲಾ ನೀರ ಬಿದ್ರೆ,ಶೀಲಾವತಿ ದುಗಲಡ್ಕ, ರಿಯಾಜ್ ಕಟ್ಟೆಕ್ಕಾರ್ಸ್, ಮೊದಲಾದವರು ಉಪಸ್ಥಿತರಿದ್ದರು.