ಗಾರ್ಡನ್ ಮಾಡುವುದಾಗಿ ಹೇಳಿ ಸ್ಮಶಾನ ಮಾಡಿದ್ದಾರೆ: ಮುಂಡೂರು ಗ್ರಾಮಸ್ಥರಿಂದ ಶಾಸಕರಿಗೆ ದೂರು
ಪುತ್ತೂರು: ಮುಂಡೂರು ಗ್ರಾಮದ ಮುಂಡೂರು ಪೇಟೆಯ ಬಳಿ ಜನವಸತಿ ಪ್ರದೇಶದಲ್ಲಿ ಸ್ಮಶಾನವನ್ನು ನಿರ್ಮಾಣ ಮಾಡಿದ್ದು ಅದನ್ನು ತೆರವು ಮಾಡುವಂತೆ ಮುಂಡೂರು ಗ್ರಾಮಸ್ಥರು ಶಾಸಕರನ್ನು ಆಗ್ರಹಿಸಿದ್ದಾರೆ.
ಈ ಬಗ್ಗೆ ಆರೋಪ ಮಾಡಿದ ಗ್ರಾಮಸ್ಥರು ಇಲ್ಲಿ ತುಂಬಾ ಮನೆಗಳಿವೆ, ಮನೆಗಳ ಮಧ್ಯೆ ಸ್ಮಶಾನ ನಿರ್ಮಾಣ ಮಾಡಿದ್ದಾರೆ. ನಾವು ಇಲ್ಲಿ ಗಾರ್ಡನ್ ನಿರ್ಮಾಣ ಮಾಡುತ್ತಿದ್ದೇವೆ ಎಂದು ಗ್ರಾಪಂ ನವರು ತಿಳಿಸಿದ್ದರು, ನಾವು ಅದನ್ನು ಸತ್ಯ ಎಂದು ನಂಬಿದ್ದೆವು ಆದರೆ ಕೊನೇ ಗಳಿಗೆಯಲ್ಲಿ ಅದು ಸ್ಮಶಾನ ಎಂದು ಗೊತ್ತಾದಾಗ ನಾವು ಪ್ರತಿಭಟಿಸಿದ್ದೆವು ಆದರೆ ಏನೂ ಪ್ರಯೋಜನವಾಗಲಿಲ್ಲ, ಜನವಸತಿ ಪ್ರದೇಶದಿಂದ ಸ್ಮಶಾನವನ್ನು ತೆರವು ಮಾಡುವಂತೆ ಸ್ಥಳೀಯರು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕರು ಈಗಾಗಲೇ ಸ್ಮಶಾನದ ಎಲ್ಲಾ ಕಾಮಗಾರಿಗಳೂ ಮುಗಿದಿದೆ ಇನ್ನು ಸ್ಥಳಾಂತರ ಮಾಡುವುದು ಹೇಗೆ? ಇಲ್ಲಿ ಸ್ಮಶಾನ ನಿರ್ಮಾಣ ಮಾಡುತ್ತಿದ್ದಾರೆ ಎಂಬ ವಿಚಾರ ನಿಮ್ಮ ಸ್ಥಳೀಯ ಗ್ರಾಪಂ ಸದಸ್ಯರಿಗೆ ಗೊತ್ತಿರಲೇಬೇಕಿತ್ತು. ಯಾಕೆ ನಿಮ್ಮ ಬಳಿ ಗಾರ್ಡನ್ ಮಾಡುತ್ತಿದ್ದೇವೆ ಎಂದು ಸುಳ್ಳು ಹೇಳಿದ್ದರೋ ಗೊತ್ತಿಲ್ಲ. ಗ್ರಾಪಂ ಗೆ ಎಲ್ಲಾ ವಿಚಾರವೂ ಗೊತ್ತಿದ್ದೇ ಇಲ್ಲಿ ಸ್ಮಶಾನ ಮಾಡಲಾಗಿದೆ ಇನ್ನೇನು ಮಾಡಲು ಸಾಧ್ಯ ಎಂದು ಹೇಳಿದರು. ನಮ್ಮ ಮಕ್ಕಳಿಗೆ ಇಲ್ಲಿನ ಸ್ಮಶಾನದಿಂದ ಭಯದ ವಾತಾವರಣವಿದೆ ದಯವಿಟ್ಟು ಏನಾದರೂ ಮಾಡಿ ಎಂದು ಮಹಿಳೆಯರು ಶಾಸಕರಲ್ಲಿ ವಿನಂತಿಯನ್ನು ಮಾಡಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಕಾವು ಹೇಮನಾಥ ಶೆಟ್ಟಿ, ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.