ಅವೈಜ್ಞಾನಿಕ ಕಾಮಗಾರಿಯಿಂದ ಕುಂಬ್ರದ ಸರಕಾರಿ ಬಾವಿ ಕುಸಿತ ಆರೋಪ : ವಲಯ ಕಾಂಗ್ರೆಸ್ ಅಧ್ಯಕ್ಷರಿಂದ ಶಾಸಕರಿಗೆ ದೂರು
ಪುತ್ತೂರು: ಒಳಮೊಗ್ರು ಗ್ರಾಪಂಗೆ ನೂತನ ಕಟ್ಟಡ ಕಾಮಗಾರಿ ಕೆಲದಿನಗಳ ಹಿಂದೆ ನಡೆದಿದ್ದು ಇದರ ಕಾಮಗಾರಿ ಮಾಡುವ ವೇಳೆ ಅಲ್ಲಿರುವ ಸರಕಾರಿ ಬಾವಿ ಬಳಿ ಅವೈಜ್ಞಾನಿಕ ಕಾಮಗಾರಿ ನಡೆಸಿರುವ ಕಾರಣ ಮಳೆಗೆ ಬಾವಿ ಕುಸಿತಕ್ಕೊಳಗಾಗಿದೆ ಎಂದು ಆರೋಪಿಸಿ ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಪೂಜಾರಿ ಬೊಳ್ಳಾಡಿಯವು ಶಾಸಕರಿಗೆ ದೂರು ನೀಡಿದ್ದಾರೆ.
ಕಳೆದ 52 ವರ್ಷಗಳಿಂದ ಇಲ್ಲಿ ಸರಕಾರಿ ಬಾವಿ ಇದೆ. ಇದರ ನೀರನ್ನು ಸ್ಥಳೀಯ ಸಾರ್ವಜನಿಕರು, ಕಾಲನಿ ನಿವಾಸಿಗಳು ಬಳಕೆ ಮಾಡುತ್ತಿದ್ದಾರೆ. ಗ್ರಾಮದಲ್ಲಿ ನೀರಿನ ಅಭಾವ ಉಂಟಾದಾಗ ಇದರ ನೀರನ್ನೇ ಬಳಕೆ ಮಾಡಲಾಗುತ್ತದೆ. ಸ್ಥಳೀಯ ಸರಕಾರಿ ಶಾಲೆಗೂ ಇದರ ನೀರು ಉಪಯೋಗಿಸಲ್ಪಡುತ್ತಿದೆ ಹೀಗಿದ್ದರೂ ಅದನ್ನು ಉಳಿಸುವ ಪ್ರಯತ್ನವನ್ನು ಗ್ರಾಪಂ ಮಾಡಬೇಕಿತ್ತು.
ಇಂಟರ್‌ಲಾಕ್ ಹಾಕಿದ್ದೇ ಕುಸಿತಕ್ಕೆ ಕಾರಣ
ಬಾವಿಯ ಕಟ್ಟೆಯ ಸುತ್ತ ಮಣ್ಣು ಹಾಕಿ ಆ ಬಳಿಕ ಮರಳನ್ನು ಹಾಕಿ ಇಂಟರ್‌ಲಾಕ್ ಅಳವಡಿಸಿದ್ದು ಮಳೆ ನೀರು ಇಂಗಿದ ಕಾರಣ ಬಾವಿ ಕುಸಿತಕ್ಕೊಳಗಾಗಿದೆ. ಇಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಕಾಮಗಾರಿಯನ್ನು ನಡೆಸಲಾಗಿದೆ. ಬಾವಿಯ ಸುತ್ತ ಕಾಂಕ್ರೀಟ್ ಹಾಕಿದ್ದರೆ ಬಾವಿ ಕುಸಿತಕ್ಕೊಳಗಾಗುವುದನ್ನು ತಡೆಯಬಹುದಿತ್ತು. ಕಾಮಗಾರಿಯಲ್ಲಿ 40 ಪರ್ಸೆಂಟಿಂಗಿಂತ ಅಧಿಕ ಗೋಲ್ಮಾಲ್ ನಡೆದಿದೆ ಎಂಬ ಸಂಶಯವಿದ್ದು ಕೂಡಲೇ ಈ ಬಗ್ಗೆ ಕ್ರಮಕೈಗೊಳ್ಳಬೇಕಿದೆ ಎಂದು ಅಶೋಕ್ ಬೊಳ್ಳಾಡಿ ಅಗ್ರಹಿಸಿದ್ದಾರೆ.
ಯಾವುದೇ ಕಾರಣಕ್ಕೂ ಈ ಬಾವಿಯನ್ನು ಗ್ರಾಪಂ ಮುಚ್ಚಬಾರದು. ಇದನ್ನು ಮುಚ್ಚುವುದಕ್ಕೆ ಮುಂದಾದರೆ ಪ್ರತಿಭಟನೆ ಮಾಡಬೇಕಾಗುತ್ತದೆ. ಕುಸಿದಿರುವ ಬಾವಿಯ ಮಣ್ಣು ತೆಗೆದು ಅದಕ್ಕೆ ರಿಂಗ್ ಹಾಕಿ ಅದನ್ನು ಮತ್ತೆ ಬಳಕೆಗೆ ಯೋಗ್ಯ ಬಾವಿಯನ್ನಾಗಿ ಮಾಡಬೇಕು. ಈ ಬಗ್ಗೆ ಶಾಸಕರಿಗೆ ಅಶೋಕ್ ಪೂಜಾರಿ ಬೊಳ್ಳಾಡಿ ಮನವಿ ಮಾಡಿದ್ದಾರೆ.