ಪೈವಳಿಕೆ ಪ್ರಭಾಕರ ನೋಂಡ ಕೊಲೆ ಪ್ರಕರಣ: ಮತ್ತೆ ಇಬ್ಬರ ಬಂಧನ
ಕುಂಬಳೆ: ಪೈವಳಿಕೆ ಕಳಾಯಿಯಲ್ಲಿ ಪ್ರಭಾಕರ ನೋಂಡ (42.ವ ) ಎಂಬವರನ್ನು ಬರ್ಬರವಾಗಿ ಕೊಲೆಗೈದ ಪ್ರಕರಣದಲ್ಲಿ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಪ್ರಕರಣದ ಪ್ರಮುಖ ಆರೋಪಿ, ಸಹೋದರ ಜಯರಾಮ ನೋಂಡ (45. ವ) ಅವರನ್ನು ಪುತ್ತೂರಿನಿಂದ ಬಂಧಿಸಲಾಗಿತ್ತು. ಅವರು ನೀಡಿದ ಮಾಹಿತಿಯಂತೆ ಮೊಗ್ರಾಲ್ ಪುತ್ತೂರು ನಿವಾಸಿ ಇಸ್ಮಾಯಿಲ್ (28. ವ) ಮತ್ತು ಪೈವಳಿಕೆ ಅಟ್ಟೆಗೋಳಿಯ ಖಾಲಿದ್ (35. ವ) ಅವರನ್ನು ಕಾಸರಗೋಡು ಡಿವೈಎಸ್ಪಿ ಪಿ. ಕೆ. ಸುಧಾಕರನ್ ಬಂಧಿಸಿದ್ದಾರೆ.
ಪೈವಳಿಕೆಯ ಕಳಾಯಿ ಮತ್ತು ಕರ್ನಾಟಕದ ಪುತ್ತೂರಿನಲ್ಲಿ ಬೆಲೆಬಾಳುವ ಸ್ಥಳದ ಪಾಲಿನ ವಿಷಯದಲ್ಲಿ ಸಹೋದರರ ನಡುವೆ ವಿವಾದವಿತ್ತು. ಸ್ಥಳದಿಂದ ಬರುವ ಕೃಷಿ ಆದಾಯವನ್ನು ಪ್ರಭಾಕರ ನೋಂಡ ಮಾತ್ರ ಬಳಸುತ್ತಿದ್ದುದಲ್ಲದೆ, ಸ್ಥಳವನ್ನು ಪಾಲು ಮಾಡಲು ಒಪ್ಪದಿರುವುದೇ ಕೊಲೆ ಕಾರಣ ಎಂದು ಹೇಳಲಾಗಿದೆ.
ಪ್ರಭಾಕರ ನೋಂಡರ ಕೊಲೆಗೆ ಇಸ್ಮಾಯಿಲ್ ಮತ್ತು ಖಾಲಿದ್ ಎಂಬ ಬಾಡಿಗೆ ಹಂತಕರಿಗೆ 10 ಲಕ್ಷ ರೂ. ಸುಪಾರಿ ನೀಡಿರುವುದಾಗಿ ಜಯರಾಮ ನೋಂಡ ತನಿಖೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ ಎನ್ನಲಾಗಿದೆ.