ಕರಾವಳಿಕ್ರೈಂ

ಹಸುಗೂಸು ಸಹಿತ ತಮ್ಮ ಇಬ್ಬರು ಮಕ್ಕಳನ್ನು ಮನೆಯೊಂದರಲ್ಲಿ ಬಿಟ್ಟು ಹೆತ್ತವರು ನಾಪತ್ತೆ



ಉಪ್ಪಿನಂಗಡಿ: ಒಂದು ತಿಂಗಳ ಹಸುಗೂಸು ಸಹಿತ ತಮ್ಮ ಇಬ್ಬರು ಮಕ್ಕಳನ್ನು ಮನೆಯೊಂದರಲ್ಲಿ ಬಿಟ್ಟು ಹೆತ್ತವರು ನಾಪತ್ತೆಯಾಗಿದ್ದು ಹೆತ್ತವರ ಪತ್ತೆಗಾಗಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ, ಮಕ್ಕಳನ್ನು ಸದ್ಯಕ್ಕೆ ಪುತ್ತೂರಿನ ರಾಮಕೃಷ್ಣ ಆಶ್ರಮಕ್ಕೆ ಒಪ್ಪಿಸಿದ ಘಟನೆ ಕರಾಯದಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕು ಕರಾಯ ಪರಿಸರದಲ್ಲಿ ಅಲೆಮಾರಿ ಜನಾಂಗದ ದಂಪತಿ ಬುಟ್ಟಿ ಹೆಣೆಯುವ ಕಾಯಕದೊಂದಿಗೆ ಆಗಾಗ ಕಾಣಿಸುತ್ತಿದ್ದರು. ಮದ್ಯವ್ಯಸನಿಗಳಾದ ಇವರು ಅಲ್ಲಲ್ಲಿ ಮಲಗಿಕೊಂಡು ಅವ್ಯವಸ್ಥಿತ ಜೀವನ ನಡೆಸುತ್ತಿದ್ದರು. ದಂಪತಿಗೆ ನಾಲ್ಕು ವರ್ಷದ ಮಗನಿದ್ದು, ಒಂದು ತಿಂಗಳ ಹಿಂದೆಯಷ್ಟೇ ಹೆಣ್ಣು ಮಗುವೊಂದು ಜನಿಸಿತ್ತು.

ಈ ಎರಡೂ ಮಕ್ಕಳನ್ನು ಜೂ. 2ರಂದು ಕರಾಯ ಗ್ರಾಮದ ಫಾತಿಮಾ ಎಂಬಾಕೆಯ ಮನೆಯಲ್ಲಿ ಬಿಟ್ಟು ನಾವು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಹೋಗಿ ಬರುತ್ತೇವೆ ಎಂದು ಈ ದಂಪತಿ ತಿಳಿಸಿದ್ದರು. ಮಾನವೀಯತೆ ಮೆರೆದ ಫಾತಿಮಾ ಅವರು ಇದಕ್ಕೆ ಒಪ್ಪಿಕೊಂಡಿದ್ದರು. ಆದರೆ ಆ ಬಳಿಕ ಈ ದಂಪತಿಯ ಪತ್ತೆಯಿರಲಿಲ್ಲ. ಒಂದು ತಿಂಗಳ ಹಸುಗೂಸು ಸಹಿತ ಇಬ್ಬರು ಮಕ್ಕಳ ಲಾಲನೆ ಪಾಲನೆ ಮಾಡಿದ ಫಾತಿಮಾರವರು 2 ದಿನ ಕಳೆದರೂ ಹೆತ್ತವರು ಕಾಣಿಸಿಕೊಳ್ಳದೇ ಹೋದಾಗ ಕಳವಳಗೊಂಡು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿಗಳ ಗಮನಕ್ಕೆ ತಂದು ಮಕ್ಕಳನ್ನು ಪುತ್ತೂರಿನ ರಾಮಕೃಷ್ಣ ಆಶ್ರಮಕ್ಕೆ ಒಪ್ಪಿಸಿದರು.

ಮಕ್ಕಳನ್ನು ಬಿಟ್ಟು ಹೋಗಿ ಮೂರು ದಿನವಾದರೂ ಹೆತ್ತವರ ಪತ್ತೆ ಇಲ್ಲದಿರುವುದನ್ನು ಗಮನಿಸಿದ ಫಾತಿಮಾರವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿ, ಮಕ್ಕಳನ್ನು ತನ್ನ ಮನೆಯಲ್ಲಿ ಬಿಟ್ಟು ಹೋಗಿರುವ ದಂಪತಿಯನ್ನು ಪತ್ತೆ ಹಚ್ಚಲು ವಿನಂತಿಸಿದ್ದಾರೆ. ದಂಪತಿಯ ಪೈಕಿ ಗಂಡನ ಹೆಸರು ತಿಳಿದಿಲ್ಲವೆಂದೂ, ಪತ್ನಿಯ ಹೆಸರು ಆಕೆಯ ಮಗ ತಿಳಿಸಿದ ರೀತಿಯಲ್ಲಿ ಲೀಲಾ ಎಂದಾಗಿದೆ ಎಂದು ದೂರಿನಲ್ಲಿ ಉಲ್ಲೇಖೀಸಲಾಗಿದೆ. ಉಪ್ಪಿನಂಗಡಿ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುತಿದ್ದಾರೆ.

Leave a Reply

Your email address will not be published. Required fields are marked *

error: Content is protected !!