ಸಂಸದರ ಕಾರು ಅಲ್ಲಾಡಿದ್ದೇ ಶಾಫಿ ಬೆಳ್ಳಾರೆ ಬಂಧನಕ್ಕೆ ಕಾರಣ: ನಸ್ರಿಯಾ ಬೆಳ್ಳಾರೆ
ಬೆಳ್ಳಾರೆಯಲ್ಲಿ ಸಂಸದರ ಕಾರನ್ನು ಅವರದ್ದೇ ಪಕ್ಷದ ಕಾರ್ಯಕರ್ತರು ಅಲ್ಲಾಡಿಸಿದ್ದೇ ಎಸ್.ಡಿ.ಪಿ.ಐ ಮುಖಂಡ ಶಾಫಿ ಬೆಳ್ಳಾರೆ ಬಂಧನಕ್ಕೆ ಕಾರಣ ಎಂದು ಎಸ್.ಡಿ.ಪಿ.ಐ ನಾಯಕಿ ನಸ್ರಿಯಾ ಬೆಳ್ಳಾರೆ ಹೇಳಿದರು.

ಎ.19ರಂದು ಪುತ್ತೂರಿನಲ್ಲಿ ಶಾಫಿ ಬೆಳ್ಳಾರೆ ಪರವಾಗಿ ನಾಮಪತ್ರ ಸಲ್ಲಿಸಲು ಆಗಮಿಸಿದ ವೇಳೆ ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡಿದರು.
ಸರಳ, ಸಜ್ಜನಿಕೆಯ ಶಾಫಿ ಬೆಳ್ಳಾರೆ ಅವರನ್ನು ಸುಳ್ಳು ಕೇಸಿನಲ್ಲಿ ಸಿಲುಕಿಸಿರುವುದು ಅಕ್ಷಮ್ಯ. ಬೆಳ್ಳಾರೆಯಲ್ಲಿ ಸಂಸದರ ಕಾರನ್ನು ಅವರದ್ದೇ ಕಾರ್ಯಕರ್ತರು ಅಲ್ಲಾಡಿಸಿದ ನಂತರ ಅವರನ್ನು ಸಮಾಧಾನ ಮಾಡಲು ಶಾಫಿ ಬೆಳ್ಳಾರೆಯನ್ನು ಬಲಿಪಶು ಮಾಡಲಾಯಿತು. ಈ ರೀತಿಯ ಅನ್ಯಾಯವನ್ನು ಸಹಿಸಲು ಸಾಧ್ಯವಿಲ್ಲ. ನ್ಯಾಯ ಒಂದಲ್ಲ ಒಂದು ದಿನ ಗೆದ್ದೇ ಗೆಲ್ಲುತ್ತದೆ ಎಂದು ಅವರು ಹೇಳಿದರು.
ಅಮಾಯಕ ಶಾಫಿ ಬೆಳ್ಳಾರೆ ಅವರನ್ನು ಈ ಬಾರಿಯ ಚುನಾವಣೆಯಲ್ಲಿ ಬೆಂಬಲಿಸುವ ಮೂಲಕ ಅನ್ಯಾಯಕ್ಕೆ ಉತ್ತರ ನೀಡಬೇಕು. ಫಾಶಿಸ್ಟ್ ಮನೋಸ್ಥಿತಿಗಳ ಬಗ್ಗೆ ನಾವು ಅರಿತುಕೊಳ್ಳಬೇಕು ಎಂದು ನಸ್ರಿಯಾ ಬೆಳ್ಳಾರೆ ಹೇಳಿದರು.