ಅಜ್ಜಿಯ ಸರ ಎಗರಿಸಲು ಯತ್ನಿಸಿದ ಕಳ್ಳನ ಮುಖಕ್ಕೆ ಹೊಡೆದು ರಕ್ಷಿಸಿದ ಬಾಲಕಿ
ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ವಿಳಾಸ ಕೇಳುವ ನೆಪದಲ್ಲಿ ತನ್ನ ಅಜ್ಜಿಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಎಗರಿಸಿದ ಸ್ಕೂಟರ್ ಸವಾರನ ಮುಖಕ್ಕೆ ಯಾವುದೊ ವಸ್ತುವಿನಿಂದ ಹೊಡೆದು ಅಜ್ಜಿಯ ಜೀವ ಮತ್ತು ಸರವನ್ನು ರಕ್ಷಿಸಿದ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ನಡೆದಿದ್ದು ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿ ಇದೀಗ ವೈರಲ್ ಆಗಿದೆ.

ರಾತ್ರಿ 8.30ರ ವೇಳೆ 60 ವರ್ಷದ ಅಜ್ಜಿಯೊಬ್ಬರು ತನ್ನ ಇಬ್ಬರು ಮೊಮ್ಮಕ್ಕಳೊಂದಿಗೆ ಪುಣೆಯ ಶಿವಾಜಿನಗರದ ಕಾಲೋನಿಯಲ್ಲಿರುವ ಮನೆಗೆ ಹೋಗಲು ಫುಟ್ ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಹೆಲ್ಮೆಟ್ ಧರಿಸಿ ಸ್ಕೂಟರ್ ನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ವಿಳಾಸ ಕೇಳುವ ನೆಪದಲ್ಲಿ ಅಜ್ಜಿಯ ಕೊರಳಲ್ಲಿದ್ದ ಚಿನ್ನದ ಸರ ಎಗರಿಸಲು ಕತ್ತಿಗೆ ಕೈಹಾಕಿದ್ದ. ಈ ವೇಳೆ ಅಜ್ಜಿ ಆತನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಂತೆ ದಿಢೀರ್ ಆಗಿ ಮೊಮ್ಮಗಳು ಕೈಯಲ್ಲಿದ್ದಯಾವುದೊ ವಸ್ತುವಿನಿಂದ ಕಳ್ಳನ ಮುಖಕ್ಕೆ ಸತತವಾಗಿ ಹೊಡೆದಿದ್ದಾಳೆ. ನಂತರ ಅಜ್ಜಿ ಕೂಡಾ ಬಲವಾಗಿ ಕೈಯಲ್ಲಿದ್ದ ಚೀಲದಿಂದ ಹೊಡೆದಾಗ ಕಳ್ಳ ಸ್ಕೂಟರ್ ನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದ.
10 ವರ್ಷದ ಮೊಮ್ಮಗಳು ಅಜ್ಜಿಯ ಜೀವ ಮತ್ತು ಸರವನ್ನು ಕಾಪಾಡಿದ್ದು ನಾಗರಿಕ ಸಮಾಜದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.