ಬೆಳ್ತಂಗಡಿ: ಮಹಿಳೆಯ ಕರಿಮಣಿ ಸರ ಎಳೆದು ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಿದ ಪೊಲೀಸರು
ಬೆಳ್ತಂಗಡಿ: ಕೊಯ್ಯೂರಿನ ಮಹಿಳೆಯೋರ್ವರ ಕರಿಮಣಿ ಸರ ಎಳೆದು ಪರಾರಿಯಾಗಿರುವ ಘಟನೆಗೆ ಸಂಬಂಧಿಸಿ ಕೊಯ್ಯೂರು ಗ್ರಾಮದ ಉಮೇಶ್ ಗೌಡ (40ವ) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಕೋರಿಯಾರು ನಿವಾಸಿ ದಾಮೋದರ ಭಟ್ ಪತ್ನಿ ರಾಜೀವಿ (50) ಅವರು ಡಿ.9ರಂದು ಬೆಳ್ತಂಗಡಿಗೆ ತೆರಳಿ ಕೊಯ್ಯೂರು ಗ್ರಾಮದ ಪಾಂಬೇಲು ಬಳಿ ಬಸ್ಸು ಇಳಿದಿದ್ದಾರೆ. ಬಳಿಕ ತನ್ನ ಕೋರಿಯಾರಿನ ಮನೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿಯು ಹಿಂಬಾಲಿಸಿಕೊಂಡು ಬಂದು ಮಹಿಳೆಯ ಕುತ್ತಿಗೆಯಲ್ಲಿದ್ದ 32 ಗ್ರಾಂ ತೂಕದ ಚಿನ್ನದ ಕರಿಮಣಿ ಸರವನ್ನು ಎಳೆದಿದ್ದಾನೆ.ಮಹಿಳೆ ಕರಿಮಣಿಯನ್ನು ಗಟ್ಟಿಯಾಗಿ ಹಿಡಿದುಕೊಂಡ ಕಾರಣ ಅದು ತುಂಡಾಗಿ ಒಂದು ಭಾಗ ಆರೋಪಿಯ ಕೈಗೆ ಸಿಕ್ಕಿದ್ದು ಆತ ಪರಾರಿಯಾಗಿದ್ದ. ಬೆಳ್ತಂಗಡಿ ವೃತ್ತ ಉಪನಿರೀಕ್ಷಕ ನಾಗೇಶ್ ಕದ್ರಿ ನೇತೃತ್ವದ ವಿಶೇಷ ತಂಡ ಆರೋಪಿ ಪತ್ತೆಗೆ ಕಾರ್ಯಾಚರಣೆ ನಡೆಸಿ ಡಿ.10ರಂದು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಕರಿಮಣಿ ಸರದ ಒಂದು ಭಾಗವನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.