ಕೇರಳದಲ್ಲಿ ಹೀಗೊಂದು ವಿಚಿತ್ರ : ಕೋಝಿಕ್ಕೋಡ್ ನೈನಂವಾಲಪ್ಪು ಪ್ರದೇಶದಲ್ಲಿ ಹಿಂದಕ್ಕೆ ಸರಿದ ಸಮುದ್ರ
ಕೇರಳದ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಶನಿವಾರ ಸಂಜೆ ವಿಚಿತ್ರವಾದ ಬೆಳವಣಿಗೆಯಲ್ಲಿ, ದಿಢೀರನೆ ಸಮುದ್ರದ ಅಲೆಗಳು ಹಿಂದಕ್ಕೆ ಸರಿದಿವೆ. ಅಲೆಗಳು ತಟಸ್ಥಗೊಂಡು ಸ್ಥಳೀಯರಲ್ಲಿ ಆತಂಕ ಮೂಡಿಸಿದ ಬಗ್ಗೆ ವರದಿಯಾಗಿದೆ.
ಕೋಝಿಕ್ಕೋಡ್‌ನ ನೈನಂವಾಲಪ್ಪು ಬಳಿಯ ಕೋಠಿ ಬೀಚ್‌ನಲ್ಲಿ ಶನಿವಾರ ಸಂಜೆ ಹಲವು ಗಂಟೆಗಳ ಕಾಲ ಸಮುದ್ರ 50 ಮೀಟರ್‌ವರೆಗೆ ತಗ್ಗಿತ್ತು. ಇದು ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದೆ. ಬಳಿಕ ಕೆಲ ಗಂಟೆಗಳ ಬಳಿಕ ಸಮುದ್ರ ಸಹಜ ಸ್ಥಿತಿಗೆ ಮರಳಿದೆ ಎಂದು ತಿಳಿದು ಬಂದಿದೆ.
ಅರಬ್ಬಿ ಸಮುದ್ರ ಅಥವಾ ಹಿಂದೂ ಮಹಾಸಾಗರದಲ್ಲಿ ಯಾವುದೇ ಭೂಕಂಪ ಅಥವಾ ಸುನಾಮಿಯ ಎಚ್ಚರಿಕೆ ಇಲ್ಲ. ಈ ವಿದ್ಯಮಾನವು ಗಾಳಿಯ ಪರಿಸ್ಥಿತಿಗಳ ಕಾರಣದಿಂದಾಗಿರಬಹುದು ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
“ಸುನಾಮಿ ಭೀತಿ ಇಲ್ಲ, ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ನರಸಿಂಹುಗರ್ ಟಿ ಎಲ್ ರೆಡ್ಡಿ ತಿಳಿಸಿದ್ದಾರೆ. ಹವಾಮಾನ ಕೇಂದ್ರ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಈ ವಿದ್ಯಮಾನವು ಸ್ಥಳೀಯವಾಗಿ ಮಾತ್ರ ದಾಖಲಾದ ಬೆಳವಣಿಗೆ ಎಂದು ಸ್ಪಷ್ಟಪಡಿಸಿದೆ.
ಸಮುದ್ರ ಹಿಂದೆ ಸರಿದಿರುವ ದೃಶ್ಯದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದು ಶನಿವಾರ ಸಂಜೆ 4 ಗಂಟೆಗೆ ಆರಂಭವಾದ ವಿದ್ಯಮಾನ. ಸಮುದ್ರವು ಸುಮಾರು 50 ಮೀಟರಿನಷ್ಟು ಒಳಗೆ ಹೋಗಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈ ವಿಚಾರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಬಳಿಕ ಅಪರೂಪದ ವಿದ್ಯಮಾನವನ್ನು ವೀಕ್ಷಿಸಲು ಸ್ಥಳೀಯರು ಮತ್ತು ಜಿಲ್ಲೆಯ ಇತರ ಭಾಗಗಳಿಂದ ಜನರು ಸೇರಲಾರಂಭಿಸಿದ್ದರು.
ಪ್ರಸ್ತುತ ಘಟನೆಗೆ ಯಾವುದೇ ಕಾರಣವಿಲ್ಲ. ಆದರೂ ಜಲಾವೃತ ಪ್ರದೇಶದಲ್ಲಿರುವ ಜನರು ಈ ಸಮಯದಲ್ಲಿ ಸಮುದ್ರಕ್ಕೆ ಇಳಿಯದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಬಳಿಕ ಪೊಲೀಸರು ಮತ್ತು ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆ ಗುಂಪು ಸೇರದಂತೆ ಘೋಷಣೆ ಮಾಡಿದರು ಎಂದು ಕೇರಳದ ಮಾಧ್ಯಮಗಳು ವರದಿ ಮಾಡಿವೆ.