ತಾನು ಹೇಳಿದ ಸ್ಥಳದಲ್ಲಿ ಬಸ್ ನಿಲ್ಲಿಸಲಿಲ್ಲ ಎಂಬ ಕೋಪ- ಬಸ್ಸಿಗೆ ಕಲ್ಲೆಸೆದ ಪ್ರಯಾಣಿಕ
ಉಪ್ಪಿನಂಗಡಿ: ತಾನು ಬಯಸಿದ ಸ್ಥಳದಲ್ಲಿ ಬಸ್ಸನ್ನು ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಬೆಂಗಳೂರಿನಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವೇಗದೂತ ಬಸ್ಸಿಗೆ ಕಲ್ಲು ಬಿಸಾಡಿ ಬಸ್ಸಿನ ಗಾಜು ಪುಡಿಗಟ್ಟಿದ ಘಟನೆ ಸೋಮವಾರ ನಡೆದಿದೆ.
ಹೆದ್ದಾರಿ ಅಗಲೀಕರಣದ ಕಾಮಗಾರಿಯ ಕಾರ್ಮಿಕನಾಗಿರುವ ವ್ಯಕ್ತಿ ಮದ್ಯ ಸೇವಿಸಿ ಬಸ್ಸನ್ನು ನಿಲ್ಲಿಸಲು ಸೂಚಿಸಿದ್ದಾರೆ. ಆದರೆ ಬಸ್ಸು ನಿಲ್ಲದೆ ಮುಂದುವರಿದಾಗ ಕುಪಿತಗೊಂಡ ಆತ ಬಸ್ಸಿಗೆ ಕಲ್ಲೆಸೆದಿದ್ದು ಇದರಿಂದಾಗಿ ಬಸ್ಸಿನಲ್ಲಿದ್ದ ಪ್ರಯಾಣಿಕರೊಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ. ಕಲ್ಲೆಸೆದ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಘಟನೆಯ ಬಗ್ಗೆ ಮಾತುಕತೆ ಮೂಲಕ ಬಗೆಹರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.