ಪೆರ್ನೆ: ಇಬ್ಬರು ಮಕ್ಕಳನ್ನು ಬಾವಿಗೆ ಎಸೆದ ಮಹಿಳೆ! ಒಂದು ಮಗು ಮೃತ್ಯು
ಉಪ್ಪಿನಂಗಡಿ: ಮಹಿಳೆಯೊಬ್ಬರು ಎರಡು ಪುಟ್ಟ ಮಕ್ಕಳನ್ನು ಬಾವಿಗೆ ಎಸೆದಿರುವ ಘಟನೆ ಸೆ.19ರಂದು ಮಧ್ಯಾಹ್ನ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಪೆರ್ನೆಯಲ್ಲಿ ನಡೆದಿದೆ.

ಪೆರ್ನೆಯಲ್ಲಿ ವಾಸವಾಗಿರುವ ಸಿನಾನ್ (32) ಹಾಗೂ ನೂರುನ್ನಿಸಾ (28) ದಂಪತಿ ನಡುವೆ ಫೋನ್ ಕರೆಯಲ್ಲಿ ವೈವಾಹಿಕ ಕಲಹ ನಡೆದಿತ್ತು ಎನ್ನಲಾಗಿದೆ. ಈ ವೇಳೆ ಕೋಪಗೊಂಡ ನೂರುನ್ನಿಸಾ, ಮನೆಯಲ್ಲಿದ್ದ ತನ್ನ ಸುಮಾರು ಮೂರುವರೆ ವರ್ಷದ ಮಗು ಹಾಗೂ ಪತಿಯ ತಂಗಿಯ ಸುಮಾರು ಮೂರು ವರ್ಷದ ಮಗುವನ್ನು ಮನೆಯ ಸಮೀಪದ ಬಾವಿಗೆ ಎಸೆದಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ಗಮನಕ್ಕೆ ಬಂದ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ಎರಡೂ ಮಕ್ಕಳನ್ನು ಬಾವಿಯಿಂದ ಮೇಲಕ್ಕೆತ್ತಿದ್ದಾರೆ. ಆದರೆ ಪತಿಯ ತಂಗಿಯ ಸುಮಾರು ಮೂರು ವರ್ಷದ ಮಗು ಮೃತಪಟ್ಟಿದ್ದು, ನೂರುನ್ನಿಸಾ ಅವರ ಮಗುವನ್ನು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 121/2026ರಂತೆ ಪ್ರಕರಣ ದಾಖಲಾಗಿದ್ದು, ಆರೋಪಿತೆ ನೂರುನ್ನಿಸಾಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.


