ಮಂಗಳೂರು: ಬಸ್ ಚಾಲಕನ ಧಾವಂತಕ್ಕೆ ಎಂಟನೇ ತರಗತಿ ವಿದ್ಯಾರ್ಥಿ ಬಲಿ
ಮಂಗಳೂರು: ಖಾಸಗಿ ಬಸ್ ಚಾಲಕನ ಅತಿ ವೇಗ ಮತ್ತು ಧಾವಂತದ ಚಾಲನೆಗೆ ಎಂಟನೇ ತರಗತಿಯ ವಿದ್ಯಾರ್ಥಿ ನಡು ರಸ್ತೆಯಲ್ಲಿ ದುರಂತವಾಗಿ ಮೃತಪಟ್ಟ ಘಟನೆ ನಗರದ ಲಾಲ್ ಭಾಗ್ ವೃತ್ತದ ಬಳಿ ನಡೆದಿದೆ.

ಮೃತ ಬಾಲಕನನ್ನು ಪಡೀಲ್ ಕಣ್ಣೂರಿನ ನಿವಾಸಿ ಕರುಣಾಕರ ಬೆಳ್ಚಡ ಅವರ ಪುತ್ರ ರಕ್ಷಣ್(13) ಎಂದು ಗುರುತಿಸಲಾಗಿದೆ. ಪಡೀಲಿನ ಕಪಿತಾನಿಯೋ ಸ್ಕೂಲಿನಲ್ಲಿ ಎಂಟನೇ ತರಗತಿ ಓದುತ್ತಿದ್ದ ರಕ್ಷಣ್ ಇವತ್ತು ಮನೆಯಲ್ಲಿ ಪೂಜೆ ಇದೆಯೆಂದು ಶಾಲೆಗೆ ರಜೆ ಹಾಕಿದ್ದ. ಬೆಳಗ್ಗೆ ಚಿಕ್ಕಪ್ಪ ಪಡು ಬೊಂಡಂತಿಲ ನಿವಾಸಿ ನಾರಾಯಣ ಎಂಬವರ ಜೊತೆಗೆ ಪೂಜೆಯ ಸಾಮಾನು ತರಲೆಂದು ಬೈಕಿನಲ್ಲಿ ಮಂಗಳೂರಿಗೆ ಬಂದಿದ್ದ.
ಮಂಗಳೂರು – ಕಿನ್ನಿಗೋಳಿ – ಕಟೀಲು ನಡುವೆ ಸಂಚರಿಸುವ ಖಾಸಗಿ ಬಸ್, ಇನ್ನೊಂದು ಬಸ್ಸನ್ನು ಓವರ್ ಟೇಕ್ ಮಾಡುವ ಭರದಲ್ಲಿ ಎಡ ಭಾಗದಿಂದ ಸಂಚರಿಸಿದ್ದರಿಂದ ಅಪಘಾತ ಆಗಿದೆ ಎನ್ನಲಾಗಿದೆ. ಸಂಚಾರಿ ವಿಭಾಗದ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.