ಮಳಲಿ ಮಸೀದಿ ವಿವಾದ ; ಮತ್ತೆ ತೀರ್ಪು ಮುಂದೂಡಿದ ಕೋರ್ಟ್
ಮಂಗಳೂರು: ಗುರುಪುರದ ಮಳಲಿ ಜುಮ್ಮಾ ಮಸೀದಿಯ ಕುರಿತ ವಿವಾದಕ್ಕೆ ಸಂಬಂಧಿಸಿ ಮಂಗಳೂರಿನ ಸಿವಿಲ್ ಕೋರ್ಟ್ ಮತ್ತೆ ತೀರ್ಪು ಮುಂದೂಡಿದೆ. ನವೆಂಬರ್ 9ಕ್ಕೆ ತೀರ್ಪು ನೀಡುವುದಾಗಿ ಇಂದು ನ್ಯಾಯಾಧೀಶರು ಹೇಳಿದ್ದಾರೆ.
ಮಸೀದಿ ಕುರಿತ ವ್ಯಾಜ್ಯಕ್ಕೆ ಸಂಬಂಧಿಸಿ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ಅ.17ರಂದು ತೀರ್ಪು ನೀಡುವ ಬಗ್ಗೆ ದಿನ ನಿಗದಿ ಮಾಡಿತ್ತು. ಹಾಗಾಗಿ ತೀರ್ಪಿನ ಬಗ್ಗೆ ಕುತೂಹಲ ಮನೆ ಮಾಡಿತ್ತು. ಆದರೆ ಇದೀಗ ನ್ಯಾಯಾಧೀಶರು ತೀರ್ಪನ್ನು ಮೂರನೇ ಬಾರಿಗೆ ಮುಂದೂಡಿ ಕುತೂಹಲ ಹೆಚ್ಚಿಸಿದ್ದಾರೆ.
ಮಸೀದಿಯ ನವೀಕರಣ ಕಾಮಗಾರಿಗೆ ವಿಶ್ವ ಹಿಂದು ಪರಿಷತ್ ಮುಖಂಡರು ನ್ಯಾಯಾಲಯದ ಮೂಲಕ ತಡೆಯಾಜ್ಞೆ ಹೇರಿದ್ದರು. ಆಬಳಿಕ ಜ್ಞಾನವಾಪಿ ರೀತಿಯಲ್ಲೇ ಕೋರ್ಟ್ ಕಮೀಷನ್ ಮೂಲಕ ಮಸೀದಿಯಲ್ಲಿ ಸರ್ವೇ ನಡೆಸಲು ಅವಕಾಶ ಕೋರಿ ಅರ್ಜಿ ಸಲ್ಲಿಕೆಯಾಗಿತ್ತು. ಇದಲ್ಲದೆ, ಮಸೀದಿ ಮತ್ತು ವಿಎಚ್ ಪಿ ಎರಡೂ ಕಡೆಯಿಂದ ಏಳೆಂಟು ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ನಡುವೆ, ಮಸೀದಿ ಕಡೆಯ ವಕೀಲ ಎಂ.ಪಿ.ಶೆಣೈ, ಮಳಲಿ ಮಸೀದಿ ವಕ್ಫ್ ಆಸ್ತಿಯಾಗಿದ್ದು ಈ ಬಗ್ಗೆ ನಿರ್ಧರಿಸಲು ಸಿವಿಲ್ ನ್ಯಾಯಾಲಯಕ್ಕೆ ಸಾಧ್ಯವಿಲ್ಲ. ವಕ್ಫ್ ಟ್ರಿಬ್ಯುನಲ್ ನಲ್ಲಿಯೇ ವ್ಯಾಜ್ಯ ನಡೆಯಬೇಕು ಎಂದು ಪ್ರತ್ಯೇಕ ಅರ್ಜಿ ಸಲ್ಲಿಸಿ ವಾದಿಸಿದ್ದರು. ಈ ಕುರಿತು ಮತ್ತು ಹಿಂದು ಆರಾಧನಾ ಪದ್ಧತಿ ವಿಚಾರದಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯ ಸಂಬಂಧ ವಾದ- ಪ್ರತಿವಾದ ನಡೆದಿತ್ತು. ಇವೆರಡು ಪ್ರಮುಖ ವಿಚಾರದಲ್ಲಿ ಸಿವಿಲ್ ಕೋರ್ಟ್ ತೀರ್ಪು ನೀಡುವ ನಿರೀಕ್ಷೆ ಇತ್ತು. ಆದರೆ ನವೆಂಬರ್ 9ಕ್ಕೆ ತೀರ್ಪು ನೀಡುವುದಾಗಿ ನ್ಯಾಯಾಲಯ ಹೇಳಿದೆ.
ವಿಎಚ್ ಪಿ ಪರವಾಗಿ ಚಿದಾನಂದ ಕೆದಿಲಾಯ ವಾದಿಸುತ್ತಿದ್ದು ಮಳಲಿಯದ್ದು ಮಸೀದಿಯಲ್ಲ, ಹಿಂದು ಆರಾಧನಾ ಪದ್ಧತಿಯಿದ್ದ ದೇವಸ್ಥಾನ ಆಗಿತ್ತು ಎಂಬ ಬಗ್ಗೆ ವಾದ ಮಂಡಿಸಿದ್ದಾರೆ. ಅಲ್ಲದೆ, ಈ ಕುರಿತು ಪ್ರತ್ಯೇಕ ಅರ್ಜಿಗಳನ್ನು ಕೋರ್ಟಿಗೆ ಸಲ್ಲಿಸಿದ್ದಾರೆ. ಎಲ್ಲ ಅರ್ಜಿಗಳು ಒಂದೇ ಕಡೆ ಇದ್ದು, ಸಿವಿಲ್ ನ್ಯಾಯಾಲಯಕ್ಕೆ ಈ ಕುರಿತು ನಿರ್ಧರಿಸಲು ಬರಲ್ಲ ಎಂಬ ವಾದ ಎತ್ತಿ ಹಿಡಿದಲ್ಲಿ ಇವೆಲ್ಲ ಅರ್ಜಿಗಳಿಗೆ ಹಿನ್ನಡೆಯಾಗುತ್ತದೆ. ಹೀಗಾಗಿ ಸಿವಿಲ್ ಕೋರ್ಟ್ ಈ ಕುರಿತು ನೀಡುವ ತೀರ್ಪು ಮಹತ್ವದ್ದಾಗಿದೆ.