ಕರಾವಳಿ

ವೃದ್ದೆಯ ಚಿನ್ನಾಭರಣ ಸುಲಿಗೆ ಪ್ರಕರಣ: ಆರೋಪಿ ಮೊಮ್ಮಗ ಬಂಧನ

ಬಂಟ್ವಾಳ: ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ತೆಂಕಕಜೆಕಾರು ಉದ್ದದಗುಡ್ಡೆಯಲ್ಲಿ ವೃದ್ಧೆಯೊಬ್ಬರಿಂದ ಚಿನ್ನದ ಬಳೆಗಳನ್ನು ಬಲವಂತವಾಗಿ ಎಳೆದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಮೊಮ್ಮಗನನ್ನು ಪೊಲೀಸರು ಬಂಧಿಸಿದ್ದಾರೆ.



ಆ.14ರಂದು 82 ವರ್ಷದ ಅವ್ವಮ್ಮ ಎಂಬವರು ಮನೆಯಲ್ಲಿ ಒಬ್ಬಂಟಿಯಾಗಿದ್ದ ವೇಳೆ ಮುಖಕ್ಕೆ ಬಟ್ಟೆ ಸುತ್ತಿಕೊಂಡು ಬಂದ ಅಪರಿಚಿತ ವ್ಯಕ್ತಿಯೊಬ್ಬರು ಅವರ ಕೈಯಲ್ಲಿದ್ದ ಸುಮಾರು ₹5 ಲಕ್ಷ ಮೌಲ್ಯದ, 40 ಗ್ರಾಂ ತೂಕದ ಎರಡು ಚಿನ್ನದ ಬಳೆಗಳನ್ನು ಬಲವಂತವಾಗಿ ಎಳೆದೊಯ್ದಿದ್ದ. ಈ ವೇಳೆ ವೃದ್ಧೆಯ ಕೈಗೆ ರಕ್ತಗಾಯವಾಗಿತ್ತು.

ಈ ಕುರಿತು ಅವ್ವಮ್ಮ ಅವರ ಪುತ್ರ ಸಾದಿಕ್ ನೀಡಿದ ದೂರಿನ ಮೇರೆಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ನಡೆಸಿದ ಪೊಲೀಸರು ಆ.16ರಂದು ಪ್ರಕರಣದ ಆಪಾದಿತ ಹಾಗೂ ಅವ್ವಮ್ಮ ಅವರ ಮೊಮ್ಮಗನಾದ ತೆಂಕಕಜೇಕಾರು ನಿವಾಸಿ ಶಬೀರ್ (33) ಎಂಬಾತನನ್ನು ಬಂಧಿಸಿದ್ದಾರೆ. ಆತನಿಂದ ಕಳವು ಮಾಡಲಾಗಿದ್ದ ಎರಡು ಚಿನ್ನದ ಬಳೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಆಪಾದಿತನನ್ನು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಬೆಳ್ತಂಗಡಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕಿ ರೋಹಿಣಿ ಸಿ.ಕೆ. ಅವರ ನೇತೃತ್ವದಲ್ಲಿ, ಬೆಳ್ತಂಗಡಿ ಗ್ರಾಮಾಂತರ ಸಿಪಿಐ ರವಿ ಬಿ.ಎಸ್., ಪುಂಜಾಲಕಟ್ಟೆ ಠಾಣೆ ಪಿಎಸ್‌ಐ ರಾಜೇಶ್ ಕೆ.ವಿ. ಹಾಗೂ ಸಿಬ್ಬಂದಿ ಮತ್ತು ಜಿಲ್ಲಾ ತಾಂತ್ರಿಕ ವಿಭಾಗದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!