ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್‌ನಿಂದ ‘ಎಕ್ಸೆಲೆನ್ಸಿಯಾ’ ಕಾರ್ಯಕ್ರಮ
ಪುತ್ತೂರು: ವಿದ್ಯಾರ್ಥಿಗಳು ಕಲಿಕಾ ಹಂತದಲ್ಲೇ ನಿರ್ದಿಷ್ಟ ಗುರಿಯನ್ನು ಇಟ್ಟುಕೊಳ್ಳಬೇಕು, ಯಶಸ್ಸು ಯಾವತ್ತೂ ಸುಲಭದಲ್ಲಿ ಸಿಗುವುದಿಲ್ಲ, ನಮ್ಮ ಗುರಿ ಮತ್ತು ಅದಕ್ಕೆ ಪೂರಕವಾದ ಪರಿಶ್ರಮ ನಮ್ಮನ್ನು ಎತ್ತರಕ್ಕೆ ಬೆಳೆಸುತ್ತದೆ, ನಾವು ಪ್ರಯತ್ನ ಮಾಡಿದಾದ ಅದಕ್ಕೆ ದೇವರು ಫಲ ಕೊಟ್ಟೇ ಕೊಡುತ್ತಾನೆ ಎಂದು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಇದರ ಉಪಕುಲಪತಿ ಪ್ರೊ. ಡಾ.ಎ.ಎಂ ಖಾನ್ ಹೇಳಿದರು. ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್ ವತಿಯಿಂದ ಆ.16ರಂದು ನೇರಳಕಟ್ಟೆ ಜನಪ್ರಿಯ ಗಾರ್ಡನ್‌ನಲ್ಲಿ ನಡೆದ ‘ಎಕ್ಸಲೆನ್ಸಿಯಾ-2026’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರಕಾರಿ ಹುದ್ದೆ ಪಡೆಯುವತ್ತ ಗಮನಹರಿಸಿ:
ಸರಕಾರಿ ವ್ಯವಸ್ಥೆಗಳ ಬಗ್ಗೆ ನಾವು ಟೀಕಿಸುತ್ತೇವೆ, ಚರ್ಚೆ ನಡೆಸುತ್ತೇವೆ, ಆದರೆ ಸರಕಾರಿ ವ್ಯವಸ್ಥೆಯೊಳಗೆ ಬರುವವರ ಸಂಖ್ಯೆ ಕಡಿಮೆ ಇದೆ, ವಿದ್ಯಾರ್ಥಿಗಳು ಸರಕಾರಿ ಹುದ್ದೆ ಪಡೆಯುವತ್ತ ತಮ್ಮ ಗಮನವನ್ನು ಕೇಂದ್ರೀಕರಿಸಬೇಕು, ಸರಕಾರಿ ಹುದ್ದೆ ಯಾವುದೇ ಆಗಲಿ ಅದರಲ್ಲಿ ಒಳ್ಳೆಯ ಸಂಬಳ, ಗೌರವ, ಪ್ರೊಮೋಷನ್, ರಿಟೈರ್ಡ್ ಪೆನ್ಷನ್ ಎಲ್ಲವೂ ಸಿಗ್ತದೆ, ಸರಕಾರಿ ಹುದ್ದೆಯ ಪವರ್ ಏನೆಂದು ಅದರೊಳಗೆ ಬಂದಾಗಲೇ ತಿಳಿಯುತ್ತದೆ, ಹಾಗಾಗಿ ಯಾವುದೇ ಕಾರಣಕ್ಕೂ ಸರಕಾರಿ ಕೆಲಸಕ್ಕೆ ಪ್ರಯತ್ನ ಮಾಡುವ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ತಾವು ಕಲಿಕಾ ಹಂತದಲ್ಲಿ ಮಾಡಿರುವ ಪರಿಶ್ರಮದ ಬಗ್ಗೆ ವಿವರಿಸಿದ ಪ್ರೊ. ಡಾ.ಎ.ಎಂ ಖಾನ್ ಅವರು ಸಾಧನೆ ಮಾಡಲೇಬೇಕೆಂಬ ಕನಸಿನೊಂದಿಗೆ ನಾನು ಸತತ ಪರಿಶ್ರಮಪಟ್ಟ ಕಾರಣ ಇಂದು ಈ ಹಂತಕ್ಕೆ ಬಂದು ಮುಟ್ಟಿದ್ದೇನೆ, ನೀವು ಕೂಡಾ ಜೀವನದಲ್ಲಿ ಸಾಧಕರಾಗಬೇಕು, ಅದಕ್ಕಾಗಿ ಸತತ ಪ್ರಯತ್ನ ಮಾಡಬೇಕು ಎಂದು ಹೇಳಿದರು. ಎಜುಕೇಶನಲ್ ಎಕ್ಸೆಲೆನ್ಸ್ ಫೌಂಡೇಶನ್‌ನ ಕಾರ್ಯವನ್ನು ಶ್ಲಾಘಿಸಿದ ಪ್ರೊ. ಡಾ.ಎ.ಎಂ ಖಾನ್ ಅವರು ಇಂತಹ ಸಂಸ್ಥೆಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪವಾಗುತ್ತದೆ, ಶಿಕ್ಷಣಕ್ಕೆ ಪ್ರೋತ್ಸಾಹ ಕೊಟ್ಟಾಗ ಸಮಾಜದ, ಸಮುದಾಯದ ಪರಿಸ್ಥಿತಿಯೇ ಬದಲಾಗುತ್ತದೆ, ಈ ನಿಟ್ಟಿನಲ್ಲಿ ಎಜುಕೇಶನಲ್ ಎಕ್ಸೆಲೆನ್ಸ್ ಫೌಂಡೇಶನ್‌ನ ಕಾರ್ಯ ಮಾದರಿಯಾಗಿದೆ ಎಂದು ಹೇಳಿದರು.

ಪ್ರೇರಣಾತ್ಮಕ ಭಾಷಣಕಾರರಾಗಿ ಭಾಗವಹಿಸಿದ್ದ ಡಾ. ಮೊಹಮ್ಮದ್ ವಾಸಿಕ್ (DM Neaurology AIMS NewDelhi Consultant, Fortis Hospital, Delhi), ಡಾ. ಖತೀಜಾ ಸಲ್ವಾ (MD Ophthalmology AIMMS NewsDelhi, Senior Resident Doctor AIMS NewDelhi), ಫಾರ್ಮೆಡ್ ಲಿಮಿಟೆಡ್ ಬೆಂಗಳೂರು ಇದರ ಸೀನಿಯರ್ ಎಕ್ಸಿಕ್ಯೂಟಿವ್ ವೈಸ್ ಪ್ರೆಸಿಡೆಂಟ್ ಡಾ. ಉಮ್ಮರ್ ಬೀಜದಕಟ್ಟೆ, ಚಾರ್ಟರ್ಡ್ ಅಕೌಂಟೆಂಟ್ ಸಿಎ ಅಬ್ದುಲ್ ಖಾದರ್ ತಮೀಮ್ ಮೊದಲಾದವರು ಮಾತನಾಡಿ ತಮ್ಮ ಅನುಭವಗಳನ್ನು ಬಿಚ್ಚಿಡುವುದರ ಜೊತೆಗೆ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಾಧಕರಾಗಬೇಕಾದರೆ ಏನು ಮಾಡಬೇಕು? ಯಾವ ರೀತಿಯಲ್ಲಿ ಸಿದ್ದತೆ ನಡೆಸಬೇಕು? ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಹೇಗೆ ಎದುರಿಸಬೇಕು? ಸೇರಿದಂತೆ ವಿವಿಧ ವಿಚಾರಗಳನ್ನು ಮನಮುಟ್ಟುವ ರೀತಿಯಲ್ಲಿ ವಿವರಿಸಿದರು. ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ದೆಹಲಿ ಎನ್‌ಸಿಆರ್ ಜಿಂದಾಲ್ ಗ್ಲೋಬಲ್ ಗ್ಲೋಬಲ್ ಲಾ ಕಾಲೇಜಿನ ಅಂತಿಮ ವರ್ಷದ ಬಿಬಿಎ ಎಲ್‌ಎಲ್‌ಬಿ ವಿದ್ಯಾರ್ಥಿ ಜಸೀಮ್ ಅಹ್ಮದ್ ಸಿರಾಜ್ ಹಾಗೂ ಡಾ.ಅಬ್ದುಲ್ ಬಶೀರ್ ಜನಪ್ರಿಯ ಅವರ ಪುತ್ರ ಎಂಬಿಬಿಎಸ್ ವಿದ್ಯಾರ್ಥಿ ಶಾಮಿಕ್ ವೀಡಿಯೋ ಕಾನ್ಫರೆನ್ಸ್ ಮೂಲಕ ಪ್ರೇರಣಾದಾಯಕ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಾಧಕರಿಗೆ ಸನ್ಮಾನ, ರ‍್ಯಾಂಕ್ ಗಳಿಸಿದ ವಿದ್ಯಾರ್ಥಿಗಳ ಯಶಸ್ಸಿನ ಪಯಣದ ಹಂಚಿಕೆ, ಗಣ್ಯರಿಂದ ಪ್ರೇರಣಾದಾಯಕ ಉಪನ್ಯಾಸ ಹಾಗೂ ಯುವಜನತೆಗೆ ಸ್ಪೂರ್ತಿ ತುಂಬುವ ವಿಶೇಷ ಕಾರ್ಯಕ್ರಮ ನಡೆಯಿತು. ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್‌ನ ಚೇರ್‌ಮೆನ್ ಅಮ್ಜದ್ ಖಾನ್ ಪೋಳ್ಯ ಅಧ್ಯಕ್ಷತೆ ವಹಿಸಿದ್ದರು.

ಎಸ್ಸಾಮ್ ಮನ್ಸೂರ್‌ಗೆ ಸನ್ಮಾನ:
ಕತಾರ್ ರಾಷ್ಟ್ರೀಯ ಅಂಡರ್-19 ಕ್ರಿಕೆಟ್ ತಂಡದ ಆಟಗಾರ ಮಂಗಳೂರಿನ ಎಸ್ಸಾಮ್ ಮನ್ಸೂರ್ ಅವರನ್ನು ಇದೇ ಸಂದರ್ಭದಲ್ಲಿ ವಿಶೇಷವಾಗಿ ಗೌರವಿಸಲಾಯಿತು. ಬಳಿಕ ವಿದ್ಯಾರ್ಥಿಗಳ ಕೆಲವೊಂದು ಪ್ರಶ್ನೆಗಳಿಗೆ ಎಸ್ಸಾಮ್ ಮನ್ಸೂರ್ ಉತ್ತರಿಸಿದರು.

ರಫೀಕ್ ಮಾಸ್ಟರ್‌ಗೆ ಗೌರವಾರ್ಪಣೆ:
ವರ್ಷದ ‘ಬ್ಯಾರಿ ಪ್ರಶಸ್ತಿ’ಗೆ ಭಾಜನರಾದ ಖ್ಯಾತ ಪ್ರೇರಣಾದಾಯಕ ಭಾಷಣಗಾರ, ಇಇಎಫ್ ಕೌನ್ಸಿಲರ್ ಕೂಡಾ ಆಗಿರುವ ರಫೀಕ್ ಮಾಸ್ಟರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

85 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ-ಅಮ್ಜದ್ ಖಾನ್
ಎಜುಕೇಶನಲ್ ಎಕ್ಸೆಲೆನ್ಸ್ ಫೌಂಡೇಶನ್ ವತಿಯಿಂದ 2024-25ನೇ ಸಾಲಿನಲ್ಲಿ 26 ವಿದ್ಯಾರ್ಥಿಗಳಿಗೆ 10 ಲಕ್ಷ ರೂ. ಹಾಗೂ 2025-26ನೇ ಸಾಲಿನಲ್ಲಿ 30 ಲಕ್ಷ ರೂ. ವಿದ್ಯಾರ್ಥಿ ವೇತನ ನೀಡಿದ್ದೇವೆ. 2026-27ಸಾಲಿನಲ್ಲಿ ನಮ್ಮ ಬಜೆಟ್ 45 ಲಕ್ಷ ರೂಪಾಯಿಗಳಾಗಿದ್ದು, ಇಲ್ಲಿಯವರೆಗೆ 24 ಲಕ್ಷ ರೂ. ವಿತರಿಸಿದ್ದೇವೆ, ಉಳಿದ ಮೊತ್ತವನ್ನು ಅಗತ್ಯಕ್ಕೆ ಅನುಗುಣವಾಗಿ ಹಂತ ಹಂತವಾಗಿ ಬಿಡುಗಡೆ ಮಾಡುತ್ತೇವೆ. ಶೈಕ್ಷಣಿಕವಾಗಿ ಸಮುದಾಯದ ವಿದ್ಯಾರ್ಥಿಗಳನ್ನು ಸಾಧಕರನ್ನಾಗಿ ಮಾಡಲು ನಮ್ಮ ಸಂಸ್ಥೆಯು ಈಗಾಗಲೇ ವಿವಿಧ ಕಾರ್ಯಯೋಜನೆಗಳೊಂದಿಗೆ ಕಾರ್ಯಾಚರಿಸುತ್ತಿದ್ದು ಉನ್ನತ ವಿದ್ಯಾಭ್ಯಾಸ ಬಯಸುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡುವುದರ ಜೊತೆಗೆ ದೂರದೃಷ್ಟಿ ಚಿಂತನೆ ಇಟ್ಟುಕೊಂಡು ಈ ಕಾರ್ಯವನ್ನು ಮಾಡುತ್ತಿದ್ದೇವೆ. ಶೈಕ್ಷಣಿಕವಾಗಿ ಅಭಿವೃದ್ಧಿ ಸಾಧಿಸಿದಾಗ ನಮ್ಮ ಸಮುದಾಯ, ಸಮಾಜದ ಸ್ಥಿತಿ ಬದಲಾಗುತ್ತದೆ ಎಂದು ಎಜುಕೇಶನಲ್ ಎಕ್ಸೆಲೆನ್ಸ್ ಫೌಂಡೇಶನ್ ನ ಚೇರ್ ಮೆನ್ ಅಮ್ಜದ್ ಖಾನ್ ಪೋಳ್ಯ ತಿಳಿಸಿದರು.

ಸೆಷನ್-1 ಕಾರ್ಯಕ್ರಮ:
ಬೆಳಗ್ಗೆ ಸೆಷನ್-1 ಕಾರ್ಯಕ್ರಮವನ್ನು ನಡೆಸಿಕೊಟ್ಟ ಎಜುಕೇಶನಲ್ ಎಕ್ಸೆಲೆನ್ಸ್ ಫೌಂಡೇಶನ್‌ನ ಕೌನ್ಸಿಲರ್ ಡಾ. ವಾಜಿದಾ ಬಾನು ಅವರು ಸಾಧನೆಯ ಹಾದಿಯಲ್ಲಿರುವ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು. ವಿದ್ಯಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿ ತಮ್ಮ ಕಲಿಕಾ ಅನುಭವಗಳ ಬಗ್ಗೆ ಮಾತನಾಡಿದರು.

ಇಇಎಫ್‌ನ ಕೌನ್ಸಿಲರ್ ರಫೀಕ್ ಮಾಸ್ಟರ್ ಅವರು ಪ್ರೇರಣಾದಾಯಕ ಮಾತುಗಳನ್ನಾಡಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಅನೇಕ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಪುತ್ತೂರು ಹಾಗೂ ಇತರ ಭಾಗಗಳ ಅನೇಕ ಗಣ್ಯರು, ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಬೆಂಗಳೂರು ಆಚಾರ್ಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಮಹಮ್ಮದ್ ಸ್ವರೂಪ್ ಹಾಗೂ ಇಇಎಫ್ ಕೌನ್ಸಿಲರ್ ಡಾ.ವಾಜಿದಾ ಬಾನು ಕಾರ್ಯಕ್ರಮ ನಿರೂಪಿಸಿದರು.



