ಬೆಳ್ತಂಗಡಿ: ರೂ.7.60 ಲಕ್ಷ ಮೌಲ್ಯದ ಎಂಡಿಎಂಎ, ಗಾಂಜಾ ವಶ, 21 ವರ್ಷದ ಯುವಕನ ಬಂಧನ
ಬೆಳ್ತಂಗಡಿ: ಸುಮಾರು ₹7.60 ಲಕ್ಷ ಮೌಲ್ಯದ 76.59 ಗ್ರಾಂ ಎಂಡಿಎಂಎ ಹಾಗೂ ಗಾಂಜಾ ವಶಪಡಿಸಿಕೊಂಡು 21 ವರ್ಷದ ಯುವಕನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.

ಜು.29ರಂದು ರಾತ್ರಿ ಬೆಳ್ತಂಗಡಿ ಠಾಣೆಯ ಪೊಲೀಸ್ ಉಪನಿರೀಕ್ಷಕ ಆನಂದ ಎಂ. ಹಾಗೂ ಸಿಬ್ಬಂದಿ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲು ಬಳಿ ಆಟೋ ರಿಕ್ಷಾವೊಂದರ ಸಮೀಪ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ವರ್ತಿಸುತ್ತಿರುವುದು ಗಮನಕ್ಕೆ ಬಂದಿದೆ.
ಆತನನ್ನು ವಿಚಾರಣೆ ನಡೆಸಿದಾಗ ಬೆಳ್ತಂಗಡಿ ಕುವೆಟ್ಟು ನಿವಾಸಿ ತ್ವಲಹ್ ಯಾನೆ ಅನ್ವರ್ ಯಾನೆ ಅನ್ಸರ್ (21) ಎಂದು ತಿಳಿದುಬಂದಿದೆ. ತಪಾಸಣೆ ನಡೆಸಿದಾಗ ಆತನ ಬಳಿ ಸುಮಾರು 27 ಗ್ರಾಂ ಗಾಂಜಾ ಹಾಗೂ ಮೊಬೈಲ್ ಫೋನ್ ಪತ್ತೆಯಾಗಿದೆ.
ಸ್ಥಳದಲ್ಲಿದ್ದ ರಿಕ್ಷಾ ಹಾಗೂ ಕಾರನ್ನು ಪರಿಶೀಲಿಸಿದಾಗ ₹7,60,000 ಮೌಲ್ಯದ 76.59 ಗ್ರಾಂ ಎಂಡಿಎಂಎ ಪತ್ತೆಯಾಗಿದೆ. ಆರೋಪಿ ಅನ್ಸರ್‌ಗೆ ಮಾದಕವಸ್ತು ನೀಡಲು ಬಂದಿದ್ದ ಎನ್ನಲಾದ ಅಮ್ಜತ್ ಖರಾರ್ ಎಂಬಾತ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 82/2026ರಂತೆ NDPS ಕಾಯ್ದೆಯ ಕಲಂ 8(c), 20(b)(ii)(A), 27A ಹಾಗೂ 22(c) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.





