ಕರಾವಳಿಕ್ರೈಂ

ಬೆಳ್ತಂಗಡಿ: ಸ್ನೇಹಿತನೊಂದಿಗೆ ಬಂದಿದ್ದ ಯುವತಿಯನ್ನು ಅಡ್ಡಗಟ್ಟಿ ಬೆದರಿಕೆ; 5 ಮಂದಿ ವಿರುದ್ಧ ಪ್ರಕರಣ



ಬೆಳ್ತಂಗಡಿ: ಮಂಗಳೂರಿನಲ್ಲಿ ಉದ್ಯೋಗದಲ್ಲಿರುವ ಯುವತಿಯೊಬ್ಬರು ಸ್ನೇಹಿತನೊಂದಿಗೆ ದಿಡುಪೆ ಫಾಲ್ಸ್‌ಗೆ ತೆರಳಿದ್ದ ವೇಳೆ, ಅವರನ್ನು ಪ್ರಶ್ನಿಸಿ ತಡೆದು ನಿಲ್ಲಿಸಿ ನಿಂದನೆ ಹಾಗೂ ಜೀವಬೆದರಿಕೆ ಹಾಕಿದ ಆರೋಪದಡಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ದೂರುದಾರೆಯು ಜುಲೈ 12ರಂದು ರಜೆ ಹಿನ್ನೆಲೆಯಲ್ಲಿ ತನ್ನ ಸ್ನೇಹಿತನೊಂದಿಗೆ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ದಿಡುಪೆ ಫಾಲ್ಸ್‌ಗೆ ಭೇಟಿ ನೀಡಿದ್ದರು. ಈ ವೇಳೆ ಪಾರ್ಕಿಂಗ್ ಸ್ಥಳದ ಬಳಿ ಸುಮಾರು 5-6 ಮಂದಿ ಅವರನ್ನು ಅಡ್ಡಗಟ್ಟಿ, ಅನ್ಯಧರ್ಮೀಯ ಯುವಕನೊಂದಿಗೆ ಬಂದಿರುವ ಬಗ್ಗೆ ತಕರಾರು ತೆಗೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

 



ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 75/2026ರಡಿ ಬಿಎನ್‌ಎಸ್‌ 2023ರ ಕಲಂ 126(2), 352, 351(2) ಹಾಗೂ 3(5)ರ ಅಡಿಯಲ್ಲಿ ರಂಜಿತ್, ಸುದರ್ಶನ್, ಸ್ವಸ್ತಿಕ್, ಪ್ರದೀಪ್, ದೀಕ್ಷಿತ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ತನಿಖೆಯ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!