ಬೆಳ್ತಂಗಡಿ: ಸರಣಿ ಕಳ್ಳತನ ಪ್ರಕರಣ; ಅಂತರಾಜ್ಯ ಕಳ್ಳನ ಬಂಧನ
ಬೆಳ್ತಂಗಡಿ: ಬೆಳ್ತಂಗಡಿ ಪೇಟೆಯಲ್ಲಿ ಮೇ 19ರಂದು ನಡೆದ ಸರಣಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಂತರಾಜ್ಯ ಕಳ್ಳನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ತಮಿಳುನಾಡಿನ ಕೊಯಮತ್ತೂರಿನ ಜಯಕುಮಾರ್ (55ವ) ಎಂದು ಗುರುತಿಸಲಾಗಿದೆ. ಈತ ಬೆಳ್ತಂಗಡಿ ಮಾತ್ರವಲ್ಲದೆ ಉಪ್ಪಿನಂಗಡಿ ಮತ್ತು ಸುರತ್ಕಲ್ನಲ್ಲೂ ಸರಣಿ ಕಳ್ಳತನ ನಡೆಸಿರುವುದಾಗಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.
ಜುಲೈ 8ರಂದು ಸಂಜೆ 6 ಗಂಟೆ ಸುಮಾರಿಗೆ ಗುರುವಾಯನಕೆರೆ ಜಂಕ್ಷನ್ ಬಳಿ ವ್ಯಕ್ತಿಯೊಬ್ಬ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಬೆಳ್ತಂಗಡಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಿಕಂದರ್ ಪಾಷಾ ನೇತೃತ್ವದ ತಂಡವು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತು. ವಿಚಾರಣೆಯ ವೇಳೆ ಆತ ಒಟ್ಟು ಆರು ಕಳ್ಳತನಗಳನ್ನು ಎಸಗಿರುವುದಾಗಿ ಬಾಯಿಬಿಟ್ಟಿದ್ದಾನೆ. ಈತನ ಮೇಲೆ ಕರ್ನಾಟಕ, ತಮಿಳುನಾಡು ಮತ್ತು ಕೇರಳದಲ್ಲಿ ಒಟ್ಟು 16 ಪ್ರಕರಣಗಳು ದಾಖಲಾಗಿವೆ.
ಕಾರ್ಯಾಚರಣೆಯನ್ನು ಬೆಳ್ತಂಗಡಿ ಉಪವಿಭಾಗದ ಡಿವೈಎಸ್ಪಿ ರೋಹಿಣಿ ಸಿ.ಕೆ. ಮಾರ್ಗದರ್ಶನದಲ್ಲಿ, ವೃತ್ತ ನಿರೀಕ್ಷಕ ರವಿ ಬಿ.ಎಸ್, ಸಬ್ ಇನ್ಸ್ಪೆಕ್ಟರ್ ಆನಂದ್ ಎಂ, ಸಬ್ ಇನ್ಸ್ಪೆಕ್ಟರ್ ಸಿಕಂದರ್ ಪಾಷಾ ಮತ್ತು ಇತರ ಸಿಬ್ಬಂದಿ ನಡೆಸಿದ್ದಾರೆ.




