ಬೆಳ್ತಂಗಡಿ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ, ಇಬ್ಬರು ಬಾಲಕರ ವಿರುದ್ಧ ಪ್ರಕರಣ ದಾಖಲು
ಬೆಳ್ತಂಗಡಿ: ಅಪ್ರಾಪ್ತ ಬಾಲಕಿಯ ಮೇಲೆ ಇಬ್ಬರು ಅಪ್ರಾಪ್ತ ಬಾಲಕರು ಲೈಂಗಿಕ ದೌರ್ಜನ್ಯ ಎಸಗಿ, ಜೀವಬೆದರಿಕೆ ಒಡ್ಡಿರುವ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಮ್ಮ ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಬಗ್ಗೆ ದೂರುದಾರರಿಗೆ ಇತ್ತೀಚೆಗೆ ಮಾಹಿತಿ ಸಿಕ್ಕಿದ್ದು ಈ ಹಿನ್ನೆಲೆ ದೂರುದಾರರು ತನ್ನ ಮಗಳನ್ನು ವಿಚಾರಿಸಿದಾಗ, ಅವರ ಸಂಬಂಧಿಕ ಅಪ್ರಾಪ್ತ ಬಾಲಕ ಹಾಗೂ ಆತನ ಸ್ನೇಹಿತನಾದ ಮತ್ತೋರ್ವ ಅಪ್ರಾಪ್ತ ಬಾಲಕ ಇಬ್ಬರೂ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವುದು ತಿಳಿದು ಬಂದಿದೆ.
ಈ ಇಬ್ಬರು ಅಪ್ರಾಪ್ತ ಬಾಲಕರು ಸೇರಿ 2023 ರಲ್ಲಿ, ಬೆಳ್ತಂಗಡಿಯಲ್ಲಿರುವ ಡ್ಯಾಂ ಒಂದರ ಬಳಿಯಿರುವ ಕಟ್ಟಡಕ್ಕೆ ಸಂತ್ರಸ್ತ ಬಾಲಕಿಯನ್ನು ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿ ಬಳಿಕ ಬಾಲಕಿಗೆ ಜೀವಬೆದರಿಕೆ ಒಡ್ಡಿರುವುದಾಗಿ ತಿಳಿದು ಬಂದಿದೆ.
ಈ ಕುರಿತು ಜೂ. 23ರಂದು ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ದೂರಿನ ಮೇರೆಗೆ ಮೇರೆಗೆ ಕಲಂ: 376, 376AB, 376DB, 506 ಜೊತೆಗೆ 34 ಐ.ಪಿ.ಸಿ ಮತ್ತು ಕಲಂ: 6 ಪೋಕ್ಸೋ ಕಾಯಿದೆ- 2012, ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.





